ಮದ್ಯ ಸೇವಿಸಿ ಇಬ್ಬರ ಸಾವು; ಪ್ರದೇಶದ ಮದ್ಯದಂಗಡಿಗಳು ಬಂದ್!

Pub crime
Published on

ಉತ್ತರಪ್ರದೇಶ: ಮದ್ಯಪಾನದ ಬಳಿಕ ಇಬ್ಬರು ಸಾವಿಗೀಡಾಗಿದ್ದು, ಆ ಪ್ರದೇಶದ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ. ಉತ್ತರ ಪ್ರದೇಶದ ಉಜಾನಿ ಕೊಟ್ವಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಕಚ್ಲಾ ಎಂಬಲ್ಲಿನ ನಿವಾಸಿ ಅಖಿಲೇಶ್ (35) ಎಂಬಾತ ಸಮೀಪದ ಮದ್ಯದಂಗಡಿಯಲ್ಲಿ ಇಂದು ಮದ್ಯ ಸೇವಿಸಿ ಮಧ್ಯಾಹ್ನ ಮೆನಗೆ ಮರಳಿದ್ದ. ಅದಾಗಿ ಕೆಲವೇ ಹೊತ್ತಿನಲ್ಲಿ ಆತ ಸಾವಿಗೀಡಾಗಿದ್ದ ಎಂದು ಮನೆಯವರು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

ಅಖಿಲೇಶ್​​ನ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸುತ್ತಿರುವಾಗಲೇ ಆತನ ಸಂಬಂಧಿ ಪಿಂಟು (26) ಎಂಬಾತ ಕೂಡ ಸಾವಿಗೀಡಾಗಿದ್ದಾನೆ. ಸ್ವೀಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈತನೂ ಅದೇ ಮದ್ಯದಂಗಡಿಯಲ್ಲಿ ಮದ್ಯ ಖರೀದಿಸಿ ಸೇವಿಸಿದ್ದ ಎಂಬುದು ಬಳಿಕ ತಿಳಿದುಬಂದಿದೆ.

ಇಬ್ಬರ ಸಾವಿನಿಂದ ಸಿಟ್ಟಾದ ಸ್ಥಳೀಯರು ಸಂಬಂಧಿಕರು ಕೂಡಲೇ ಮದ್ಯದಂಗಡಿಗೆ ಹೋಗಿ ಗಲಾಟೆ ಮಾಡಿ ರಸ್ತೆ ತಡೆ ನಡೆಸಿದ್ದಾರೆ. ಅಲ್ಲದೆ ಮದ್ಯದಂಗಡಿಯವರು ಕಲಬೆರಕೆ ಮದ್ಯ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪರಿಣಾಮವಾಗಿ ಪೊಲೀಸರು ಆ ಪ್ರದೇಶದ ಎಲ್ಲ ಮೂರು ಮದ್ಯದಂಗಡಿಗಳನ್ನು ಬಂದ್ ಮಾಡಿದ್ದಾರೆ. ಇವರಿಬ್ಬರನ್ನು ಬಿಟ್ಟರೆ ಬೇರೆ ಯಾರೂ ಸತ್ತಿಲ್ಲ. ಅದಾಗ್ಯೂ ಅಲ್ಲಿನ ಮದ್ಯದ ಸ್ಯಾಂಪಲ್​ಗಳನ್ನು ಪಡೆದಿದ್ದು ಪರೀಕ್ಷೆಗೆ ಕಳುಹಿಸಲಾಗಿದೆ. ಹಾಗೇ ಇಬ್ಬರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net