

ಟೋಕಿಯೊ: ಜಪಾನ್ ಕರಾವಳಿಯಲ್ಲಿ ಲಂಗರು ಹಾಕಿರುವ ಹಡಗಿನಲ್ಲಿರುವ ಇನ್ನೂ ಇಬ್ಬರು ಭಾರತೀಯರಿಗೆ ಕರೊನಾ ವೈರಸ್ ತಗಲಿರುವುದು ದೃಢಪಟ್ಟಿದೆ. ಇದರೊಂದಿಗೆ ಹಡಗಿನಲ್ಲಿರುವ ಸೋಂಕಿತರ ಸಂಖ್ಯೆ 355ಕ್ಕೇರಿದೆ. ಒಟ್ಟು 3,711 ಜನರಿರುವ ಡೈಮಂಡ್ ಪ್ರಿನ್ಸಸ್ನಲ್ಲಿ 132 ಸಿಬ್ಬಂದಿ ಹಾಗೂ ಆರು ಪ್ರಯಾಣಿಕರ ಸಹಿತ 138 ಭಾರತೀಯರಿದ್ದಾರೆ.
ಸೋಂಕಿನ ಬಗೆಗಿನ ಅಂತಿಮ ತಪಾಸಣೆ ಸೋಮವಾರ ಆರಂಭವಾಗಲಿದ್ದು, ಸೋಂಕಿಲ್ಲದಿರುವುದು ದೃಢಪಟ್ಟವರನ್ನು ಭಾರತಕ್ಕೆ ಕಳಿಸಲು ಸಹಾಯ ಮಾಡುವುದಾಗಿ ಭಾರತೀಯ ದೂತಾವಾಸದ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಈಗಾಗಲೇ ಸೋಂಕು ಪತ್ತೆಯಾಗಿರುವ ಐವರು ಭಾರತೀಯ ಸಿಬ್ಬಂದಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಜ್ವರ ಕಂಡು ಬಂದಿಲ್ಲ. ನೌಕೆಯಲ್ಲಿ ಕಳೆದ ಎರಡು ದಿನಗಳಿಂದ ಇಬ್ಬರು ಭಾರತೀಯರ ಸಹಿತ ಸೋಂಕಿನ 137 ಹೊಸ ಪ್ರಕರಣಗಳು ಪತ್ತೆಯಾಗಿವೆ. ಜಪಾನ್ ಸರ್ಕಾರದ ಆರೋಗ್ಯ ಸಂಬಂಧಿ ಸೂಚನೆಗಳನ್ನು ಪಾಲಿಸುವಂತೆ ಭಾರತೀಯ ಪ್ರಯಾಣಿಕರಿಗೆ ಕಳಿಸಿದ ಇ ಮೇಲ್ನಲ್ಲಿ ಸೂಚಿಸಿದೆ.
ಮಾರಕ ಸೋಂಕಿನಿಂದ ಚೀನಾದಲ್ಲಿ ಭಾನುವಾರ ಮತ್ತೆ 142 ಮಂದಿ ಬಲಿಯಾಗಿದ್ದು ಮೃತರ ಸಂಖ್ಯೆ 1,665ಕ್ಕೆ ಏರಿದೆ. ಹೊಸ ಸಾವಿನ ಮಾಹಿತಿ ವೈರಸ್ ಕೇಂದ್ರ ಸ್ಥಾನವಾದ ವುಹಾನ್ ಇರುವ ಹುಬೇ ಪ್ರಾಂತ್ಯದಿಂದಲೇ ವರದಿಯಾಗಿದೆ. ಸೋಂಕಿತರ ಒಟ್ಟು ಸಂಖ್ಯೆ 68,500ಕ್ಕೇರಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ನೆರವಿನ ಭರವಸೆ: ಕರೊನಾದಿಂದ ತತ್ತರಿಸಿರುವ ಚೀನಾಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭಾರತ ಭಾನುವಾರ ಘೋಷಿಸಿದೆ. ವೈದ್ಯಕೀಯ ಸಲಕರಣೆಗಳನ್ನು ಶೀಘ್ರವೇ ಕಳಿಸಲಾಗುವುದೆಂದು ಬೀಜಿಂಗ್ನಲ್ಲಿ ಭಾರತದ ರಾಯಭಾರಿಯಾಗಿರುವ ವಿಕ್ರಂ ಮಿಸ್ರಿ ಹೇಳಿದ್ದಾರೆ. ರೋಗ ನಿಯಂತ್ರಣಕ್ಕೆ ರಚನಾತ್ಮಕ ಕಾರ್ಯದ ಭಾಗವಾಗಿ ವೈದ್ಯಕೀಯ ಸಲಕರಣೆಗಳನ್ನು ರವಾನಿಸಲಾಗುತ್ತದೆ. ಸಂಕಷ್ಟ ಕಾಲದಲ್ಲಿ ಭಾರತ ಸರ್ಕಾರ ಮತ್ತು ಜನರು ಚೀನಾದ ಜೊತೆಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಕೇರಳ ವಿದ್ಯಾರ್ಥಿ ಬಿಡುಗಡೆ: ಕರೊನಾ ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳ ವಿದ್ಯಾರ್ಥಿಯೊಬ್ಬನನ್ನು ಭಾನುವಾರ ಡಿಸ್ಚಾರ್ಜ್ ಮಾಡಲಾಗಿದೆ. ಸತತ ಎರಡು ಪರೀಕ್ಷೆಗಳಲ್ಲೂ ಅವರಿಗೆ ಸೋಂಕಿನ ಲಕ್ಷಣ ಕಂಡುಬಂದಿಲ್ಲ.
406 ಭಾರತೀಯರು ಸುರಕ್ಷಿತ
ವುಹಾನ್ನಿಂದ ಭಾರತಕ್ಕೆ ಕರೆತರಲಾದ 406 ಜನರ ಪೈಕಿ ಯಾರಲ್ಲೂ ಕರೊನಾ ಸೋಂಕು ಇಲ್ಲವೆಂಬುದು ಅಂತಿಮ ಪರೀಕ್ಷೆಯಿಂದ ದೃಢಪಟ್ಟಿದೆ. ಅವರನ್ನು ಸೋಮವಾರದಿಂದ ಹಂತ ಹಂತವಾಗಿ ಮನೆಗೆ ಕಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವುಹಾನ್ನಿಂದ ಕರೆತರಲಾದ ಎಲ್ಲರನ್ನೂ ನವದೆಹಲಿಯಲ್ಲಿರುವ ಭಾರತ-ಟಿಬೆಟ್ ಗಡಿ ಪೊಲೀಸ್ನ (ಐಟಿಬಿಪಿ) ಆರೋಗ್ಯ ಕೇಂದ್ರದಲ್ಲಿ ತೀವ್ರ ನಿಗಾದಲ್ಲಿ ಇರಿಸಲಾಗಿತ್ತು. 406 ಜನರಲ್ಲಿ ಏಳು ಮಾಲ್ದೀವ್ಸ್ ಪ್ರಜೆಗಳೂ ಇದ್ದಾರೆ. ವುಹಾನ್ನಿಂದ ಕರೆತಂದ ಇನ್ನೊಂದು ತಂಡದಲ್ಲಿದ್ದ 244 ಜನರನ್ನು ಹರಿಯಾಣದ ಮನೇಸಾರ್ನಲ್ಲಿರುವ ಸೇನಾ ಕೇಂದ್ರದ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ. ಫೆಬ್ರವರಿ ಒಂದು ಮತ್ತು ಎರಡರಂದು ಏರ್ ಇಂಡಿಯಾ ವಿಮಾನದಲ್ಲಿ ಒಟ್ಟು 650 ಜನರನ್ನು ಕರೆ ತರಲಾಗಿತ್ತು.