

ಬೆಂಗಳೂರು: ಇತ್ತೀಚೆಗೆ ನಡೆದ ತಮಿಳುನಾಡಿನ ಡಿಎಂಕೆ ಮುಖಂಡ ಹಾಗೂ ರೌಡಿಶೀಟರ್ ಗುರುಸ್ವಾಮಿ ಹತ್ಯೆ ಯತ್ನ ಪ್ರಕರಣ ಸಂಬಂಧ ಬಾಣಸವಾಡಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.
ತಮಿಳುನಾಡಿನ ಮಧುರೈ ಮೂಲದ ವಿನೋದ್ ಕುಮಾರ್(೨೦) ಮತ್ತು ಕಾರ್ತಿಕ್ ಅಲಿಯಾಸ್ ಪುಲಿಯುರು ಕಾರ್ತಿಕ್(೨೮)ಬಂಧಿತರು. ಇತ್ತೀಚೆಗೆ ಪ್ರಸನ್ನ ಎಂಬಾತನನ್ನು ಬಂಧಿಸಲಾಗಿತ್ತು. ಈ ಮೂಲಕ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಇತರೆ ಸಹಚರರ ಜತೆ ಸೇರಿಕೊಂಡು ಸೆ.೪ರಂದು ಡಿಎಂಕೆ ಮುಖಂಡ ಹಾಗೂ ತಮಿಳುನಾಡಿನ ವಿವಿಧ ಪೊಲೀಸ್ ಠಾಣೆಗಳ ರೌಡಿಶೀಟರ್ ಆಗಿರುವ ಗುರುಸ್ವಾಮಿ ಹತ್ಯೆಗೆ ಯತ್ನಿಸಿದ್ದರು. ಬಂಧಿತರು ತಮಿಳುನಾಡಿನ ಎಐಡಿಎಂಕೆ ನಾಯಕ, ರೌಡಿಶೀಟರ್ ಪಾಂಡಿಯನ್‌ನ ಸಹಚರ ನವೀನ್ ಎಂಬಾತನ ಆತ್ಮೀಯರಾಗಿದ್ದಾರೆ. ತಮಿಳುನಾಡಿನ ಪಾಂಡಿಯನ್ ಗ್ಯಾಂಗ್ ತನ್ನ ಹತ್ಯೆಗೆ ಸಂಚು ರೂಪಿಸಿದೆ ಎಂಬ ಮಾಹಿತಿ ಮೇರೆಗೆ ಬೆಂಗಳೂರಿಗೆ ಬಂದು ತಲೆಮರೆಸಿಕೊಳ್ಳಲು ಸಿದ್ದತೆ ನಡೆಸಿದ್ದ ಗುರುಸ್ವಾಮಿ ಅವರು ಸೆ.೪ರಂದು ಬೆಂಗಳೂರಿನ ಕಮ್ಮನಹಳ್ಳಿ ಬಳಿಯ ಹೋಟೆಲ್‌ನಲ್ಲಿ ಮಧ್ಯವರ್ತಿ ಜತೆ ಟೀ ಕುಡಿಯುತ್ತಿದ್ದ. ಆಗ ಆರೋಪಿಗಳು ದಾಳಿ ನಡೆಸಿ ಪರಾರಿಯಾಗಿದ್ದರು.