

ಬೆಂಗಳೂರು: ಹುಲಿ ಉಗುರು ಅಥವಾ ವನ್ಯ ಜೀವಿ ಉತ್ಪನ್ನ ವಶಕ್ಕೆ ಪಡೆಯುವ ಸರ್ಕಾರದ ಧಾವಂತ, ಅತ್ಯಾಸಕ್ತಿಯು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದಂತೆ ಅರಣ್ಯ ಇಲಾಖೆ ಮತ್ವದ ಅಭಿಪ್ರಾಯವೊಂದನ್ನು ನೀಡಿದೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ವನ್ಯಜೀವಿ ಉತ್ಪನ್ನವನ್ನು ಪಾರಂಪರಿಕವಾಗಿ ಇಟ್ಟುಕೊಂಡವರು ಅಥವಾ ಬಳಕೆ ಮಾಡುವರು ೋಷಣೆ ಮಾಡಿಕೊಳ್ಳಲು 2003ರಲ್ಲಿ ಸರ್ಕಾರ ಆರು ತಿಂಗಳ ಕಾಲಾವಕಾಶ ನೀಡಿತ್ತು. ಅದೇ ರೀತಿ ಇದೀಗ ಎರಡು ತಿಂಗಳವರೆಗೆ ಕಾಲಾವಕಾಶ ನೀಡಿ ಮರಳಿ ಪಡೆಯುವುದಕ್ಕೆ ಹಾಗೂ ಕಾನೂನು ಅರಿವು ಮೂಡಿಸಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.
ಈ ಬೆಳವಣಿಗೆ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚನೆ ಮಾಡಿ ಅಂತಿಮ ತೀರ್ಮಾನ ಮಾಡಲಾಗುತ್ತದೆ ಎಂದ ಅವರು ಅರಣ್ಯ ಇಲಾಖೆಯವರೇ ಹುಲಿ ಉಗುರು ಅಥವಾ ವನ್ಯ ಜೀವಿ ಉತ್ಪನ್ನ ಬಳಸುತ್ತಿದ್ದರೆ ಅದು ಅಕ್ಷಮ್ಯ ಅಪರಾಧವಾಗಿದ್ದು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದರು.
ನವಿಲುಗರಿ ಸಂಗ್ರಹಿಸುವುದೂ ಅಪರಾಧ ಎಂದು ಸರ್ಕಾರ ಜಾಗೃತಿ ಸಂದೇಶ ಹೊರಡಿಸಿದ 24 ಗಂಟೆಯಲ್ಲೇ ಅರಣ್ಯ ಸಚಿವರು ಸ್ಪಷ್ಟನೆ ನೀಡಿದ್ದು, ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಸೆಕ್ಷನ್ 43ರ ಅಡಿಯಲ್ಲಿ ನವಿಲುಗರಿಗಳಿಗೆ ವಿನಾಯಿತಿ ನೀಡಲಾಗಿದೆ. ನವಿಲು ಗರಿಗಳಿಂದ ತಯಾರಿಸಿದ ಯಾವುದೇ ವಸ್ತುಗಳನ್ನು ರಫ್ತು ಮಾಡುವುದಕ್ಕೆ ಅವಕಾಶವಿಲ್ಲ.
ನೈಸರ್ಗಿಕವಾಗಿ ನವಿಲುಗಳಿಂದ ಉದುರಿದ ಗರಿಗಳನ್ನು ಸಂಗ್ರಹಿಸುವುದು ಮತ್ತು ದೇಶದೊಳಗೆ ಮಾರಾಟ ಮಾಡುವುದು ಕಾನೂನುಬಾಹಿರವಲ್ಲ. ಆದರೆ ನವಿಲುಗಳಿಗೆ ಹಿಂಸೆ ನೀಡಿ ಗರಿ ಕಿತ್ತರೆ ಅದು ಶಿಕ್ಷಾರ್ಹ ಅಪರಾಧ ಎಂದು ಸ್ಪಷ್ಟಪಡಿಸಿದರು.