

Missing Girls: ಕೇರಳದ ಥನೂರಿನಿಂದ ಕಾಣೆಯಾದ ಇಬ್ಬರು ವಿದ್ಯಾರ್ಥಿಗಳು ಕೋಝಿಕ್ಕೋಡ್ ತಲುಪಿದ್ದಾರೆ ಎಂಬ ಮಾಹಿತಿ ಸಿಕ್ಕ ಬೆನ್ನಲ್ಲೇ ಪೊಲೀಸರು ಅವರ ಮೊಬೈಲ್ ಅನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಇಷ್ಟಾದರೂ ಹುಡುಗಿಯರು ತಲುಪಿರುವ ಸ್ಥಳ ಯಾವುದು? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಬುಧವಾರ (ಮಾ.05) ಪರೀಕ್ಷೆಗೆ ಹೋಗ್ತೀವಿ ಎಂದು ಮನೆಯಿಂದ ಶಾಲೆಗೆ ಹೋದ ಇಬ್ಬರೂ ಹೆಣ್ಣುಮಕ್ಕಳು ನಂತರದಲ್ಲಿ ಮನೆಗೆ ಹಿಂತಿರುಗಿಲ್ಲ. ಇದನ್ನು ಗಮನಿಸಿದ ಪೋಷಕರು, ತಮ್ಮ ಮಕ್ಕಳಿಗಾಗಿ ಹಲವೆಡೆ ಹುಡುಕಾಡಿದ್ದಾರೆ. ಪ್ರಯತ್ನಗಳು ವಿಫಲಗೊಂಡ ಬೆನ್ನಲ್ಲೇ ಪೊಲೀಸರಿಗೆ ಮಕ್ಕಳು ನಾಪತ್ತೆಯಾದ ವಿಷಯವನ್ನು ಮುಟ್ಟಿಸಿದ್ದಾರೆ. ಅಶ್ವತಿ ಮತ್ತು ಫಾತಿಮಾ ಪರೀಕ್ಷೆಗೆ ಹಾಜರಾಗಿಲ್ಲ ಎಂದು ಶಿಕ್ಷಕರು ಸ್ಪಷ್ಟಪಡಿಸಿದ್ದಾರೆ. ದೂರು ದಾಖಲಿಸಿಕೊಂಡ ಥನೂರ್ ಪೊಲೀಸರು, ಬುಧವಾರ ಮಧ್ಯಾಹ್ನ 2 ಗಂಟೆಗೆ ಹುಡುಗಿಯರ ಮೊಬೈಲ್ ಫೋನ್‌ಗಳು ಕೊನೆಯದಾಗಿ ಆನ್ ಆಗಿರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ.
ಇಬ್ಬರ ಫೋನ್ನ ಕೊನೆಯ ಟವರ್ ಲೊಕೇಶನ್ ಕೋಝಿಕ್ಕೋಡ್‌ನಲ್ಲಿರುವುದು ತಿಳಿದುಬಂದಿದೆ. ತಕ್ಷಣವೇ ತಮ್ಮ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ತನಿಖೆಯನ್ನು ಕೋಝಿಕ್ಕೋಡ್ನಿಂದ ಪ್ರಾರಂಭಿಸಿದ್ದಾರೆ. ಬುಧವಾರ ಮಧ್ಯಾಹ್ನ ಹುಡುಗಿಯರು ತಿರೂರ್ ರೈಲು ನಿಲ್ದಾಣಕ್ಕೆ ಆಗಮಿಸುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದು ಪೊಲೀಸರಿಗೆ ಸಾಕ್ಷ್ಯವಾಗಿ ಲಭಿಸಿದೆ. ದೃಶ್ಯಗಳಲ್ಲಿ ಹುಡುಗಿಯರು ಶಾಲಾ ಸಮವಸ್ತ್ರ ಧರಿಸಿದ್ದರು. ಇದರ ಜತೆಗೆ ಬೇರೆ ಬಟ್ಟೆಗಳನ್ನು ಧರಿಸಿರುವುದು ಕಂಡುಬಂದಿದೆ.
ಇಬ್ಬರೂ ತಿರೂರ್‌ನಿಂದ ರೈಲು ಹತ್ತಿ ಕೋಝಿಕ್ಕೋಡ್ ತಲುಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಎಡವಣ್ಣ ಹೆಸರಿನ ಸಿಮ್ ಕಾರ್ಡ್‌ನಿಂದ ಇಬ್ಬರೂ ಹುಡುಗಿಯರ ಮೊಬೈಲ್ ಫೋನ್‌ಗಳಿಗೆ ಕರೆ ಬಂದಿದ್ದು, ಆ ಸಿಮ್ ಕಾರ್ಡ್ ಲೋಕೇಷನ್ ಪ್ರಸ್ತುತ ಮಹಾರಾಷ್ಟ್ರದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).