ನಕಲಿ ಡೆಬಿಟ್ ಕಾರ್ಡ್ ತಯಾರಿಸುತ್ತಿದ್ದ ಇಬ್ಬರ ಬಂಧನ

arrest
Published on

ತುಮಕೂರು: ನಕಲಿ ಡೆಬಿಟ್ ಕಾರ್ಡ್ ತಯಾರಿಸಿ ಎಟಿಎಂಗಳಲ್ಲಿ ಗ್ರಾಹಕರ ಖಾತೆಯಿಂದ ಹಣ ಡ್ರಾ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರ ಗ್ಯಾಂಗ್​ನ ಇಬ್ಬರನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ ಎಟಿಎಂ ಕಾರ್ಡ್ ತಯಾರಿಸಲು ಬಳಸುತ್ತಿದ್ದ ಸಲಕರಣೆಗಳು, 2 ಲ್ಯಾಪ್​ಟಾಪ್, 19 ವಿವಿಧ ಎಟಿಎಂ ಕಾರ್ಡ್ ಹಾಗೂ 53 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.

ಉತ್ತರಪ್ರದೇಶದ ಬ್ರಿಜ್​ಬನ್ ಸರೋಜ್ (35) ಮತ್ತು ಹರಿಲಾಲ್ (33) ಬಂಧಿತರು. ಇವರೊಂದಿಗೆ ಕೃತ್ಯ ಎಸಗುತ್ತಿದ್ದ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದಾರೆ.

ಎಟಿಎಂ ಕಾರ್ಡ್ ತಮ್ಮ ಬಳಿಯೇ ಇದೆ. ಆದರೂ ಖಾತೆಯಿಂದ ಹಣ ಡ್ರಾ ಆಗಿದೆ ಎಂದು ತಿಪಟೂರಿನ ಬಸವರಾಜು, ಹಾಲ್ಕುರಿಕೆ ಪರಮೇಶ್ವರಯ್ಯ, ದಿಬ್ಬೂರಿನ ಮೈಲಾರರಾವ್, ವೀರಸಾಗರದ ಮಹಮ್ಮದ್ ಜಾಬೀರ್ ಹುಸೇನ್ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರು.

ತಿಪಟೂರು, ಶಿರಾ, ಅರಸೀಕೆರೆ, ತುಮಕೂರು ಎಟಿಎಂಗಳಲ್ಲಿ ಹಣ ಡ್ರಾ ಆದ ಎಟಿಎಂಗಳ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ತುಮಕೂರಿನ ಚರ್ಚ್ ವೃತ್ತದ ಎಸ್​ಬಿಐ ಎಟಿಎಂ ಬಳಿ ಅನುಮಾನಾಸ್ಪದವಾಗಿ ಕೀಬಂಚ್ ರೀತಿಯ ವಸ್ತುಗಳನ್ನು ಹಿಡಿದುಕೊಂಡು ನಿಂತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯ ಬಯಲಾಗಿದೆ.

ರಾಜ್ಯಾದ್ಯಂತ 85 ಪ್ರಕರಣಗಳಲ್ಲಿ ಭಾಗಿ: ಎಟಿಎಂಗೆ ಬರುವವರನ್ನು ಗುರಿಯಾಗಿಸಿಕೊಂಡು ಮ್ಯಾಗ್ನೆಟಿಕ್ ಸ್ಟ್ರೈಪ್ ರೀಡರ್ ಹಾಗೂ ಪೋರ್ಟಬಲ್ ಮ್ಯಾಗ್ನೆಟಿಕ್ ಕಾರ್ಡ್ ರೆಕಾರ್ಡರ್ ಸಾಧನದಿಂದ ಕಾರ್ಡ್ ಸ್ಕ್ಯಾನ್ ಮಾಡಿಕೊಂಡು ಪಾಸ್​ವರ್ಡ್ ತಿಳಿದುಕೊಂಡು ಹಣ ಡ್ರಾ ಮಾಡುತ್ತಿದ್ದರು ಎನ್ನಲಾಗಿದೆ. ತುಮಕೂರಿನ 4 ಪ್ರಕರಣವಲ್ಲದೆ ರಾಜ್ಯಾದ್ಯಂತ 85 ಪ್ರಕರಣಗಳಲ್ಲಿ ಈ ಕಳ್ಳರ ತಂಡ ಭಾಗಿಯಾಗಿದೆ. ತಲೆಮರೆಸಿಕೊಂಡ ನಾಲ್ವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net