ಮನೆಯಲ್ಲೇ ಆರ್​.ಟಿ.ಒ. ಕಛೇರಿ ನಡೆಸುತ್ತಿದ್ದ ಖದೀಮರು !

truck
Published on

ಜೈಪುರ: ಮನೆಯಲ್ಲೇ ಆರ್.ಟಿ.ಒ. ಕಛೇರಿ ನಡೆಸುತ್ತಿದ್ದ ಖದೀಮರಿಬ್ಬರನ್ನು ರಾಜಸ್ತಾನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈವರೆಗೆ ಸಾವಿರಾರು ರಿಜಿಸ್ಟ್ರೇಷನ್ ಸರ್ಟಿಫಿಕೇಟ್(ಆರ್.ಸಿ.), ಡ್ರೈವಿಂಗ್ ಲೈಸೆನ್ಸ್​ಗಳನ್ನು 'ಇಶ್ಯೂ' ಮಾಡಿರುವ ಆರೋಪಿಗಳನ್ನು ಹಿಡಿಯಲು ಪೊಲೀಸ್ ಅಧಿಕಾರಿಯೊಬ್ಬರು ಗ್ರಾಹಕನ ಸೋಗಿನಲ್ಲಿ ಹೋಗಿದ್ದಾರೆ. ಅವರಿಗೆ 15 ನಿಮಿಷಗಳಲ್ಲೇ ಲೈಸೆನ್ಸ್ ಮಾಡಿಕೊಟ್ಟ ಆರೋಪಿಗಳು ಈಗ ಕಂಬಿ ಎಣೆಸುತ್ತಿದ್ದಾರೆ.

ಹೆದ್ದಾರಿಯ ಮಂಗಳವಾಡ ಜಂಕ್ಷನ್​ ಬಳಿ ಟ್ರಕ್​ಗಳು ನಿಲ್ಲುತ್ತಿದ್ದುದನ್ನು ಗಮನಿಸಿದ್ದ ಪೊಲೀಸರು, ತನಿಖೆ ನಡೆಸಿದಾಗ ಟ್ರಕ್ ಡ್ರೈವರ್​ಗಳು ಚಿತ್ತೊರಗಡ ಪಟ್ಟಣಕ್ಕೆ ಭೇಟಿ ನೀಡುತ್ತಿದ್ದುದು ತಿಳಿದುಬಂತು. ಅಲ್ಲಿ ದೇವೆಂದ್ರ ದಾಸ್ ಅಲಿಯಾಸ್ ದೇವರಾಜ್ ಎಂಬುವರ ಮನೆಗೆ ಹೋಗಿ ನಕಲಿ ದಾಖಲಾತಿಗಳನ್ನು ಪಡೆಯುತ್ತಿದ್ದಾರೆ ಎಂಬ ಸುಳಿವು ಸಿಕ್ಕಿತು. ಆಗ ಪೊಲೀಸ್ ಅಧಿಕಾರಿಯೊಬ್ಬರು ನಕಲಿ ಲೈಸೆನ್ಸ್ ಪಡೆಯಬಯಸಿದ ಗ್ರಾಹಕನಂತೆ ಹೋಗಿದ್ದಾರೆ. ಅಲ್ಲಿ 15 ನಿಮಿಷದಲ್ಲಿ ಡ್ರೈವಿಂಗ್ ಲೈಸೆನ್ಸ್ ತಯಾರು ಮಾಡಿಕೊಟ್ಟಾಗ, ಮನೆಯ ಮೇಲೆ ಪೊಲೀಸ್ ತಂಡ ದಾಳಿ ಇಟ್ಟಿದೆ.

ಕಳೆದ ಎಂಟು ವರ್ಷಗಳಿಂದ ಈ ಕೆಲಸ ಮಾಡುತ್ತಿರುವ ಸಂಗರಿಯಾ ನಿವಾಸಿ ದೇವೇಂದ್ರ ಬೈರಾಗಿ(33) ಮತ್ತು ಮಂಗಳವಾಡ ಚೌರಾಹದ ನಿವಾಸಿ ರಿಷಿ(25) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 200 ಚಿಪ್ ಹೊಂದಿದ ಲೈಸೆನ್ಸ್​ಗಳು, ಆರ್.ಸಿ., ಟೋಲ್ ಸ್ಲಿಪ್​ಗಳೊಂದಿಗೆ ಈ ಕೃತ್ಯಕ್ಕೆ ಬಳಸಲಾಗುತ್ತಿದ್ದ ಲ್ಯಾಪ್​ಟಾಪ್ ಮತ್ತು ಪ್ರಿಂಟರ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಜಮ್ಮು ಕಾಶ್ಮೀರ ಮತ್ತು ಗುಜರಾತ್​ ಒಳಗೊಂಡಂತೆ ಬಹುತೇಕ ರಾಜ್ಯಗಳಲ್ಲಿ ಬಳಕೆಯಲ್ಲಿದೆ ಎನ್ನಲಾದ 6 ರಿಂದ 7 ಸಾವಿರ ನಕಲಿ ಡಿ.ಎಲ್.ಗಳನ್ನು ಆರೋಪಿಗಳು ಈವರೆಗೆ ತಯಾರಿಸಿದ್ದಾರೆ. ಹಲವಾರು ರಾಜ್ಯಗಳ ಟ್ರಕ್ ಚಾಲಕರು ಆರೋಪಿಗಳ ಸಂಪರ್ಕದಲ್ಲಿದ್ದಾರೆ. ಸಾರಿಗೆ ಇಲಾಖೆಯ ಬಹುತೇಕ ದಾಖಲಾತಿಗಳ ನಕಲಿ ಪರ್ಯಾಯಗಳನ್ನು 15 ರಿಂದ 20 ನಿಮಿಷಗಳಲ್ಲಿ ಇವರು ತಯಾರಿಸುತ್ತಿದ್ದರು ಎಂದು ಚಿತ್ತೊರಗಡ ಎಸ್ಪಿ ದೀಪಕ್ ಭಾರ್ಗವ ತಿಳಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net