ಗಂಗಾ ತೀರ್ಥದಿಂದ ತಾಜ್​ಮಹಲ್ ಶುದ್ಧೀಕರಣ: ಇಬ್ಬರು ಪೊಲೀಸರ ವಶಕ್ಕೆ

Two men arrested for offering
Published on

ಆಗ್ರಾ: ವಿಶ್ವ ಪ್ರಸಿದ್ದ ತಾಜ್​ಮಹಲ್​ ಶಹಜಹಾನ್​ ತನ್ನ ಪತ್ನಿಯ ಮೇಲಿನ ಪ್ರೀತಿಯಿಂದ ಕಟ್ಟಿಸಿದ ಸ್ಮಾರಕವಲ್ಲ. ಬದಲಾಗಿ ಅದು ಶಿವನ ದೇವಸ್ಥಾನ ತೇಜೋಮಹಲ್ ಎಂದು ಈ ಹಿಂದಿನಿಂದಲೂ ಹಿಂದೂ ಸಂಘಟನೆಗಳು ಆರೋಪಿಸುತ್ತಾ ಬಂದಿದೆ. ತಾಜ್​ಮಹಲ್​ಗೆ ಮರುನಾಮಕರಣ ಮಾಡಬೇಕೆಂದು ನ್ಯಾಯಾಲಯಗಳಲ್ಲಿ ಅರ್ಜಿಗಳೂ ದಾಖಲಾಗಿವೆ. ಸೋಶಿಯಲ್ ಮೀಡಿಯಾಗಳಲ್ಲಿ ಕೂಡ ಅನೇಕ ಬಾರಿ ಈ ವಿಷಯ ಚರ್ಚೆಯಾಗಿ ಸುದ್ದಿಗಳು ವೈರಲ್ ಆಗಿತ್ತು.

ಇದೀಗ ಇಂದು (ಆಗಸ್ಟ್ 03) ತಾಜ್​ಮಹಲ್​ನೊಳಗಡೆ ಗಂಗಾ ನದಿ ನೀರಿನ ತೀರ್ಥ ಪ್ರೋಕ್ಷಣೆ ಮಾಡಿದ್ದಾರೆ. ಈ ಇಬ್ಬರು ವ್ಯಕ್ತಿಗಳನ್ನು ಉತ್ತರಪ್ರದೇಶದ ತಾಜ್​ಗಂಜ್ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಅಖಿಲ ಭಾರತೀಯ ಹಿಂದೂ ಮಹಾಸಭಾದ ಸದಸ್ಯರು ಎಂದು ಹೇಳಿಕೊಂಡಿದ್ದಾರೆ.

ತಾಜ್​ಮಹಲ್​ ಶಹಜಹಾನ್​ ಕಟ್ಟಿಸಿದ ಸ್ಮಾರಕವಲ್ಲ. ಇದು ಶಿವನ ಕ್ಷೇತ್ರವಾಗಿರುವುದರಿಂದ ಈ ಶ್ರಾವಣ ಮಾಸದ ಶನಿವಾರದ ದಿನ ನಾವು ಇಲ್ಲಿ ಪವಿತ್ರ ತೀರ್ಥ ಸಿಂಪಡಿಸಿದ್ದೇವೆ ಎಂದು ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ತೀರ್ಥ ಪ್ರೋಕ್ಷಣೆ ಮಾಡಿದವರನ್ನು ತಾಜ್​ಮಹಲ್​ನ ಭದ್ರತೆಯ ಜವಾಬ್ದಾರಿ ಹೊಂದಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ವಶಕ್ಕೆ ಪಡೆದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.

ಆರೋಪಿಗಳು ತಾಜ್​ಮಹಲ್​ ನೋಡಲು ಬರುವ ಪ್ರವಾಸಿಗರಂತೆ ಟಿಕೆಟ್​ ಖರೀದಿಸಿ ಸ್ಮಾರಕದೊಳಗೆ ಹೋಗಿದ್ದಾರೆ. ಪ್ರವಾಸಗರಿಗೆ ಕುಡಿಯುವ ನೀರು ಒಯ್ಯಲು ಅವಕಾಶ ಕಲ್ಪಿಸಿರುವುದನ್ನು ಬಳಸಿಕೊಂಡ ಇವರು ಪ್ಲಾಸ್ಟಿಕ್ ಬಾಟಲಿಯಲ್ಲಿ ತೀರ್ಥ ಕೊಂಡೊಯ್ದು ಸ್ಮಾರಕದೊಳಗಡೆ ಪ್ರೋಕ್ಷಣೆ ಮಾಡಿದ್ದಾರೆ.

ಈ ಹಿಂದೆ ಅಖಿಲ ಭಾರತೀಯ ಹಿಂದೂ ಮಹಾಸಭಾದ ಮಹಿಳಾ ಸದಸ್ಯರು ತಾಜ್​ಮಹಲ್​ನ ಶುದ್ಧೀಕರಣ ಮಾಡುತ್ತೇವೆ ಎಂದು ಗಂಗಾ ನದಿಯಿಂದ ನೀರು ತೆಗೆದುಕೊಂಡು ಪಾದಯಾತ್ರೆ ಹಮ್ಮಿಕೊಂಡಿತ್ತು. ಆದರೆ, ಆಗ್ರಾ ಪೊಲೀಸರು ಅವರನ್ನು ಮಾರ್ಗ ಮದ್ಯೆ ತಡೆದು ಪ್ರಯತ್ನ ವಿಫಲಗೊಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net