

ಬೆಂಗಳೂರು: ಅಪಾರ್ಟ್ವೆುಂಟ್ಗಳಲ್ಲಿ ಫ್ಲ್ಯಾಟ್ ಖರೀದಿಸುವ ನೆಪದಲ್ಲಿ ಗ್ರಾಹಕರ ಹೆಸರಿನಲ್ಲಿ ನಕಲಿ ದಾಖಲೆ ಸಲ್ಲಿಸಿ ವಿವಿಧ ಬ್ಯಾಂಕ್ಗಳಲ್ಲಿ 20 ಕೋಟಿ ರೂ. ಗೂ ಅಧಿಕ ಸಾಲ ಪಡೆದು ವಂಚಿಸಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರನಗರದ ಮಂಜುನಾಥ್ (34) ಹಾಗೂ ಕೆಂಗೇರಿ ದೊಡ್ಡಬೆಲೆ ನಿವಾಸಿ ರಂಗನಾಥ್ (37) ಬಂಧಿತರು. ಆರೋಪಿಗಳಿಂದ 2 ಐಷಾರಾಮಿ ಕಾರುಗಳು ಮತ್ತು ಲ್ಯಾಪ್ಟಾಪ್ ವಶಪಡಿಸಿಕೊಳ್ಳಲಾಗಿದೆ.
ನಿರ್ಮಾಣ ಹಂತದ ಅಪಾರ್ಟ್ವೆುಂಟ್ಗಳನ್ನು ಅಮಾಯಕರಿಗೆ ತೋರಿಸಿ ತಾವೇ ಮಾಲೀಕರೆಂದು ಹೇಳಿ ಗ್ರಾಹಕರಿಂದ ಕೆವೈಸಿ ದಾಖಲಾತಿಗಳನ್ನು ಆರೋಪಿಗಳು ಪಡೆಯುತ್ತಿದ್ದರು. ಬಳಿಕ ಬಿಲ್ಡರ್ಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಗ್ರಾಹಕರ ಹೆಸರಿನಲ್ಲಿ ಬ್ಯಾಂಕ್ಗಳಲ್ಲಿ ಸಾಲ ಪಡೆದು ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು.
ಇತ್ತೀಚೆಗೆ ಮಿಲ್ಲರ್ಸ್ ರಸ್ತೆಯ ಸಿಂಡಿಕೇಟ್ ಬ್ಯಾಂಕ್ಗೆ ಫ್ಲ್ಯಾಟ್ ಖರೀದಿಗೆ ಸಾಲ ಕೋರಿ ವ್ಯಾಪಾರಿ ರವಿಕುಮಾರ್ ಅರ್ಜಿ ಸಲ್ಲಿಸಿದ್ದರು. ಬ್ಯಾಂಕ್ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ಖದೀಮರ ವಂಚನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ಆರೋಪಿ ಮಂಜುನಾಥ್ಗೆ ಸೀರೆ ವ್ಯಾಪಾರಿ ರವಿಕುಮಾರ್ ಪರಿಚಯವಾಗಿತ್ತು. ‘ಎಬಿಸಿ ಬಿಲ್ಡರ್ಸ್ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ ಮಂಜುನಾಥ್, ಫ್ಲ್ಯಾಟ್ ಖರೀದಿಗೆ ಸಾಲ ಕೊಡಿಸುವುದಾಗಿ ಹೇಳಿದ್ದ. ಅದನ್ನು ನಂಬಿದ ರವಿಕುಮಾರ್, ಕೆಲ ದಿನಗಳ ಬಳಿಕ ಫ್ಲ್ಯಾಟ್ ಖರೀದಿಸಲು ಆಸಕ್ತಿ ತೋರಿ ಆರೋಪಿಯನ್ನು ಭೇಟಿ ಮಾಡಿದ್ದರು. ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿದ ಮಂಜುನಾಥ, ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ರಾಯನ್ ಸನ್ರೈಸ್ ಅಪಾರ್ಟ್ವೆುಂಟ್ ಮಾಲೀಕ ಮಲ್ಲಿಕಾರ್ಜುನ್ ಹೆಸರಿನಿಂದ ರವಿಕುಮಾರ್ ಪತ್ನಿ ಮಂಜುಳಾ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸಿ ಜಿಪಿಎ ಮಾಡಿಸಿದ್ದ. ಈ ಫ್ಲ್ಯಾಟ್ ಖರೀದಿಗೆ ಎಲ್ ಆಂಡ್ ಟಿ ಬ್ಯಾಂಕ್ನಲ್ಲಿ ರವಿಕುಮಾರ್ ಹೆಸರಿನಲ್ಲಿ 28 ಲಕ್ಷ ರೂ. ಹಾಗೂ ಸಿಂಡಿಕೇಟ್ ಬ್ಯಾಂಕ್ನಲ್ಲಿ ಮಂಜುಳಾ ಹೆಸರಿನಲ್ಲಿ 39.8 ಲಕ್ಷ ರೂ. ಸಾಲ ಮಂಜೂರು ಮಾಡಿಸಿಕೊಂಡು ಹಣವನ್ನು ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿದ್ದ.
ನಂತರ ಹೆಣ್ಣೂರಿನ ಕೀರ್ತನ ಎನ್ಕ್ಲೇವ್ ಅಪಾರ್ಟ್ವೆುಂಟ್ನಲ್ಲಿ ಫ್ಲ್ಯಾಟ್ ಖರೀದಿ ಸೋಗಿನಲ್ಲಿ ರವಿಕುಮಾರ್ ದಾಖಲೆ ಬಳಸಿ ಮತ್ತೊಂದು ಬ್ಯಾಂಕ್ನಿಂದ 45 ಲಕ್ಷ ರೂ. ಸಾಲ ಪಡೆದಿದ್ದ. ಇತ್ತ ಹಣ ನೀಡಿದ್ದರೂ ಫ್ಲ್ಯಾಟ್ ಕೊಡದ ಕಾರಣ ರವಿಕುಮಾರ್, ರಾಯನ್ ಸನ್ ರೈಸ್ ಅಪಾರ್ಟ್ವೆುಂಟ್ ಮಾಲೀಕ ಮಲ್ಲಿಕಾರ್ಜುನ್ ಅವರನ್ನು ವಿಚಾರಿಸಿದ್ದರು. ತಮ್ಮಲ್ಲಿ
ಮಂಜುಳಾ ಹೆಸರಿನಲ್ಲಿ ಯಾವುದೇ ಫ್ಲ್ಯಾಟ್ ವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆತಂಕ ಗೊಂಡ ರವಿಕುಮಾರ್, ತಕ್ಷಣ ಮಂಜುನಾಥ್ಗೆ ಕರೆ ಮಾಡಿದಾಗ ತಾಂತ್ರಿಕ ಸಮಸ್ಯೆ ಆಗಿದೆ ಎಂದು ಸಬೂಬು ಹೇಳಿದ್ದ.
ಇತ್ತ ಮೂರನೇ ಬಾರಿ ಸಾಲ ಪಡೆಯಲು ಸಿಂಡಿಕೇಟ್ ಬ್ಯಾಂಕ್ ಮಿಲ್ಲರ್ ರಸ್ತೆ ಶಾಖೆಗೆ ದಾಖಲೆ ಗಳನ್ನು ಆರೋಪಿ ಸಲ್ಲಿಸಿದ್ದ. ದಾಖಲೆ ಪರಿಶೀಲನೆ ನಡೆಸಿದ ಬ್ಯಾಂಕ್ ಮ್ಯಾನೇಜರ್ ಪಾಂಡ್ಯನ್, ಅರ್ಜಿದಾರ ರವಿಕುಮಾರ್ರನ್ನು ಕರೆಸಿ ವಿಚಾರಿಸಿದಾಗ ವಂಚನೆ ಪ್ರಕರಣ ಅರಿವಿಗೆ ಬಂದಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಹಲವರ ಹೆಸರಿನಲ್ಲಿ ಸಾಲ
ಸಿಂಡಿಕೇಟ್ ಬ್ಯಾಂಕ್ನಲ್ಲಿ ಸಾಲಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿದ್ದ ದಾಖಲೆಗಳನ್ನೇ ಮಂಜುನಾಥ್ ತನ್ನ ಪತ್ನಿ ಕೀರ್ತನಾ ಮತ್ತು ಸ್ನೇಹಿತರಾದ ಮಲ್ಲಿಕಾರ್ಜುನ್, ರಂಗನಾಥ್, ರವಿಕಿರಣ್, ದಿಲೀಪ್ ಕುಮಾರ್ ಹಾಗೂ ಚಂದ್ರು ಮತ್ತಿತರರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆ ಬೇರೆ ಬ್ಯಾಂಕ್ಗಳಿಗೆ ನಕಲಿ ದಾಖಲೆಗಳನ್ನು ನೀಡಿ ಸಾಲ ಪಡೆದಿದ್ದಾನೆ. ಒಂದೇ ಫ್ಲ್ಯಾಟ್ಗೆ ಬೇರೆ ಬೇರೆ ನಂಬರ್ಗಳನ್ನು ನೀಡಿ ವ್ಯಕ್ತಿಗಳಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಬ್ಯಾಂಕ್ಗಳಿಗೆ ನೋಟಿಸ್
ಬಂಧಿತ ಆರೋಪಿ ಮಂಜುನಾಥ್, ಸಾಲ ಕೋರಿ ಅರ್ಜಿ ಸಲ್ಲಿಸಿದಾಗ ಸರಿಯಾಗಿ ದಾಖಲೆ ಪರಿಶೀಲನೆ ನಡೆಸದೆ ಸಾಲ ಮಂಜೂರು ಮಾಡಿರುವುದರಲ್ಲಿ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯವೂ ಇದೆ. ಈ ಬಗ್ಗೆ ವಿಚಾರಣೆ ನಡೆಸಲು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೂ ಸಿಸಿಬಿ ನೋಟಿಸ್ ನೀಡಿದೆ.