ಶೋಪಿಯಾನ್‌ ಎನ್‌ಕೌಂಟರ್‌: ಇಬ್ಬರು ಭಯೋತ್ಪಾದಕರ ಹತ್ಯೆ, ಮುಂದುವರೆದ ಭದ್ರತಾ ಪಡೆಗಳ ಶೋಧ ಕಾರ್ಯಾಚರಣೆ

encounter
Published on

ಶೋಪಿಯಾನ್‌: ಕಾಶ್ಮೀರದ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ಯಶಸ್ಸು ಕಂಡಿವೆ. ಶೋಪಿಯಾನ್‌ನ ಅಲ್ಶಿಪೋರಾದಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ಉಗ್ರರನ್ನು ಹತ್ಯೆ ಮಾಡಲಾಗಿದೆ. ಉಗ್ರರ ಬಗ್ಗೆ ಖಚಿತ ಮಾಹಿತಿ ಪಡೆದ ಯೋಧರು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಇಬ್ಬರು ಭಯೋತ್ಪಾದಕರ ಹತ್ಯೆ

ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ಮುಂದುವರೆದಿದೆ, ಇದರಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಭಾರತೀಯ ಭದ್ರತಾ ಪಡೆಗಳು ಮತ್ತು ಪೊಲೀಸರು ಸಂಪೂರ್ಣ ಬಲ ಹಾಕಿ ಭಯೋತ್ಪಾದಕರನ್ನು ಎದುರಿಸಲು ಮುಂದಾಗಿದ್ದಾರೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ತಮ್ಮ ಸ್ಥಾನವನ್ನು ಕಾಯ್ದುಕೊಂಡಿವೆ.

ಬೆಳಗ್ಗೆಯಿಂದ ನಡೆಯುತ್ತಿದೆ ಶೋಧ ಕಾರ್ಯ

ಜಿಲ್ಲೆಯ ಅಲ್ಶಿಪೋರಾ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಇಂದು ಮುಂಜಾನೆಯಿಂದ ಎನ್‌ಕೌಂಟರ್ ನಡೆಯುತ್ತಿದೆ. ಹತ್ಯೆಗೀಡಾದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರಲ್ಲಿ ಒಬ್ಬರು ಈ ವರ್ಷದ ಆರಂಭದಲ್ಲಿ ಬ್ಯಾಂಕ್ ಗಾರ್ಡ್ ಸಂಜಯ್ ಶರ್ಮಾ ಅವರನ್ನು ಕೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕಾಶ್ಮೀರಿ ಪಂಡಿತನನ್ನು ಕೊಂದಿದ್ದ ಭಯೋತ್ಪಾದಕ

ಹತ್ಯೆಗೀಡಾದ ಭಯೋತ್ಪಾದಕರನ್ನು ಲಷ್ಕರ್-ಎ-ತೊಯ್ಬಾದ ಮೋರಿಫತ್ ಮಕ್ಬೂಲ್ ಮತ್ತು ಜಾಜಿಮ್ ಫಾರೂಕ್ ಅಲಿಯಾಸ್ ಅಬ್ರಾರ್ ಎಂದು ಗುರುತಿಸಲಾಗಿದೆ. ಅಬ್ರಾರ್ ಕಾಶ್ಮೀರಿ ಪಂಡಿತ್ ದಿವಂಗತ ಸಂಜಯ್ ಶರ್ಮಾ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾಶ್ಮೀರ ವಲಯ) ವಿಜಯ್ ಕುಮಾರ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net