

ಪವಿತ್ರಾ ಕುಂದಾಪುರ ಬೆಂಗಳೂರು
ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇದಿನೆ ಹೆಚ್ಚುತ್ತಲೇ ಇದ್ದು, ತ್ವರಿತ ವಿಲೇವಾರಿಗೊಳಿಸುವ ಮೂಲಕ ಆರೋಪಿಗಳಿಗೆ ಶಿಕ್ಷೆ ವಿಧಿಸಲು ದೇಶಾದ್ಯಂತ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಮಾಡಲಾಗಿದೆ. ಈವರೆಗೆ ಬರೋಬ್ಬರಿ 2.14 ಲಕ್ಷ ಪೋಕ್ಸೋ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಆದಾಗ್ಯೂ ಇನ್ನೂ 2.02 ಲಕ್ಷ ಕೇಸ್‌ಗಳು ಬಾಕಿ ಉಳಿದಿವೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಕೇಂದ್ರದ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಹೈಕೋರ್ಟ್‌ಗಳು ನೀಡಿರುವ ಮಾಹಿತಿ ಪ್ರಕಾರ 2023ರ ಡಿ.31ರವರೆಗೆ 30 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 411 ವಿಶೇಷ ಪೋಕ್ಸೋ ಕೋರ್ಟ್‌ಗಳು ಸೇರಿ 757 ವಿಶೇಷ ತ್ವರಿತ ನ್ಯಾಯಾಲಗಳು ಕಾರ್ಯನಿರ್ವಹಿಸುತ್ತಿವೆ.
ಪ್ರಕರಣಗಳ ತ್ವರಿತ ವಿಚಾರಣೆಗಾಗಿಯೇ 2019ರಿಂದ ಕೇಂದ್ರ ಸರ್ಕಾರ ಪ್ರಾಯೋಜಿತ ವಿಶೇಷ ಯೋಜನೆ ರೂಪಿಸಿದ್ದು, ಅದರಡಿ ಎಲ್ಲ ರಾಜ್ಯಗಳಲ್ಲಿ ವಿಶೇಷ ಕೋರ್ಟ್‌ಗಳನ್ನು ಸ್ಥಾಪಿಸಲಾಗಿದೆ. ಈ ಯೋಜನೆ ಜಾರಿಯಾದಾಗಿನಿಂದ ಇಲ್ಲಿವರೆಗೆ ಪೋಕ್ಸೋ ವಿಶೇಷ ಕೋರ್ಟ್‌ಗಳೇ 1.38 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದು, ಇನ್ನೂ 1,34,945 ಪ್ರಕರಣಗಳು ಬಾಕಿ ಉಳಿದಿವೆ ಎಂದು ಮಾಹಿತಿ ನೀಡಲಾಗಿದೆ.
ಉತ್ತರಪ್ರದೇಶದಲ್ಲಿ ಅತಿಹೆಚ್ಚು 28,283 ಪ್ರಕರಣ ಇತ್ಯರ್ಥಗೊಂಡಿದ್ದು, 52,184 ಕೇಸ್‌ಗಳು ಬಾಕಿಯಿವೆ. ಮಧ್ಯಪ್ರದೇಶದಲ್ಲಿ 20,092 ಕೇಸ್ ಇತ್ಯರ್ಥವಾಗಿದ್ದು, 7671, 3ನೇ ಸ್ಥಾನದಲ್ಲಿ ಮಹಾರಾಷ್ಟ್ರದಲ್ಲಿ 10,221 ಕೇಸ್ ಇತ್ಯರ್ಥವಾಗಿದ್ದು, 2010 ಪ್ರಕರಣ ಬಾಕಿ ಉಳಿದಿವೆ. ಕರ್ನಾಟಕದಲ್ಲಿ 5894 ಪ್ರಕರಣ ವಿಲೇವಾರಿಯಾಗಿದ್ದು, 3145 ಕೇಸ್‌ಗಳು ಬಾಕಿ ಉಳಿದಿವೆ. ಪೋಕ್ಸೋ ಕೇಸ್‌ಗಳ ವಿಚಾರಣೆಗಾಗಿ ಕರ್ನಾಟಕದಲ್ಲಿ 31 ವಿಶೇಷ ನ್ಯಾಯಾಲಯಗಳು ಕಾರ್ಯಾಚರಣೆ ನಡೆಸುತ್ತಿವೆ.
1953 ಕೋಟಿ ರೂ. ಆರ್ಥಿಕ ನೆರವು
ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರಣೆಗಾಗಿ ರೂಪಿಸಿರುವ ಕೇಂದ್ರ ಪ್ರಾಯೋಜಿತ ವಿಶೇಷ ಯೋಜನೆಯನ್ನು ಇನ್ನೂ 3 ವರ್ಷ ಮುಂದುವರಿಸಲು ಅನುಮೋದನೆ ಸಿಕ್ಕಿದೆ. 2026ರ ಮಾ.31 ರವರೆಗೆ ತ್ವರಿತ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಕೇಂದ್ರ ಸರ್ಕಾರ 1952.23 ಕೋಟಿ ರೂ. ಆರ್ಥಿಕ ನೆರವು ಮೀಸಲಿಟ್ಟಿದೆ. ಆರಂಭದಲ್ಲಿ ಒಂದು ವರ್ಷಕ್ಕೆ ರೂಪಿಸಿದ್ದ ಯೋಜನೆಯನ್ನು 2023 ರವರೆಗೆ ವಿಸ್ತರಿಸಲಾಗಿತ್ತು.
ವಿಶೇಷ ಕೋರ್ಟ್ ಕಾರ್ಯವಿಧಾನ ಹೇಗೆ?
* ರಾಜ್ಯ ಸರ್ಕಾರವು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜತೆ ಚರ್ಚಿಸಿ ಪ್ರತಿ ಜಿಲ್ಲೆಯಲ್ಲೂ ವಿಶೇಷ ನ್ಯಾಯಾಲಯ ಸ್ಥಾಪನೆ.
* ಪೊಲೀಸರು ಪೋಕ್ಸೋ ಕಾಯ್ದೆಯಡಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು.
* 30 ದಿನಗಳೊಳಗೆ ಮಗುವಿನ ಸಾಕ್ಷ್ಯ ದಾಖಲಿಸಬೇಕು ಮತ್ತು ವಿಳಂಬಕ್ಕೆ ಕಾರಣ ಕೊಡಬೇಕು.
* ಸಾಧ್ಯವಾದಷ್ಟು ಮಟ್ಟಿಗೆ ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಬೇಕು.
ಕೇಂದ್ರದ ಪ್ರಾಯೋಜಿತ ಯೋಜನೆಯಡಿ ಪೋಕ್ಸೊ ನ್ಯಾಯಾಲಯ ಪ್ರಾರಂಭಿಸಲಾಯಿತು. ಇಲ್ಲಿ ವಿಶೇಷ ಅಭಿಯೋಜಕರು ಇರುವುದರಿಂದ ನ್ಯಾಯದಾನದ ವ್ಯವಸ್ಥೆ ತ್ವರಿತಗತಿಯಲ್ಲಿ ಸಾಗುತ್ತಿದೆ. ಹಲವು ವರ್ಷಗಳಿಂದ ಇತ್ಯರ್ಥವಾಗದ ಪ್ರಕರಣಗಳನ್ನು ಕಡಿಮೆ ಅವಧಿಯಲ್ಲಿ ವಿಲೇವಾರಿ ಮಾಡಲು ಅನುವು ಮಾಡಿಕೊಟ್ಟಿದೆ.
ಅರುಣ ಶ್ಯಾಮ್, ಹೈಕೋರ್ಟ್ ಹಿರಿಯ ವಕೀಲರು
ಪೋಕ್ಸೊ ನ್ಯಾಯಾಲಯವೂ ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯಡಿ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡಿ, ನ್ಯಾಯಾಂಗ ವ್ಯವಸ್ಥೆ ಮೇಲಿನ ಹೊರೆ ತಗ್ಗಿಸುತ್ತಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತಿದೆ. ಅದರೆ ಸಂತ್ರಸ್ತರು ಹಾಗೂ ಸಾಕ್ಷಿದಾರರು ನ್ಯಾಯಕ್ಕಾಗಿ ಬಹಳ ದೂರ ಪ್ರಯಾಣಿಸದಂತೆ ಪ್ರತಿ ತಾಲೂಕಿನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸುವುದನ್ನು ಕಡ್ಡಾಯಗೊಳಿಸುವತ್ತ ಗಮನಹರಿಸಬೇಕು.
ಪಿ.ವೆಂಕಟೇಶ್ ದಳವಾಯಿ, ಹೈಕೋರ್ಟ್ ವಕೀಲರು