ಹಾಸನಾಂಬೆ ದರ್ಶನ ಪಡೆದು ಮನೆಗೆ ತೆರಳುತ್ತಿದ್ದ ಪಾದಚಾರಿಗಳಿಗೆ ಕಾರು ಡಿಕ್ಕಿ! ಸ್ಥಳದಲ್ಲೇ ತಂದೆ-ಮಗಳು ಸಾವು | Hassan

accident
Published on

Hassan: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ತಾಯಿಯ ದರ್ಶನ ಪಡೆಯಬೇಕು ಎಂಬ ಹಂಬಲದಿಂದ ದೇವಾಲಯಕ್ಕೆ ಭೇಟಿ ನೀಡಿದ್ದ ದಂಪತಿ, ದರ್ಶನ ಮುಗಿಸಿಕೊಂಡು ಗುರುವಾರ (ಅ.31) ರಾತ್ರಿ ಸುಮಾರು 11.40ರ ಆಸುಪಾಸಿನಲ್ಲಿ ಹತ್ತಿರದಲ್ಲಿದ್ದ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕಾರೊಂದು ದಂಪತಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ತಂದೆ-ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಅಪ್ಪ-ಮಗಳು ದೂರಕ್ಕೆ ಹಾರಿ ಬಿದ್ದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಪಘಾತದ ಘಟನೆಯಲ್ಲಿ ಪತ್ನಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಲೂರು ತಾಲೂಕು, ಪಾಳ್ಯ ಹೋಬಳಿ, ಮುದ್ದನಾಯಕನಹಳ್ಳಿ ಗ್ರಾಮದ ಕುಮಾರ್ (38), ಮಗಳು ಕಾವ್ಯಾ (12) ಮೃತ ದುರ್ದೈವಿಗಳು. ಕುಮಾರ್ ಅವರ ಪತ್ನಿ ಪುಟ್ಟಮ್ಮ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

20 ಅಡಿ ದೂರ

ಕುಮಾರ್ ದಂಪತಿ ಗುರುವಾರ ಸಂಬಂಧಿಕರ ಜತೆಗೆ ಹಾಸನಾಂಬ ದೇವಿ ದರ್ಶನ ಪಡೆದು ಜಯನಗರ ಬಡಾವಣೆಯಲ್ಲಿರುವ ತಮ್ಮ ಚಿಕ್ಕಪ್ಪನ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ರಾತ್ರಿ 11.40ರ ಸಮಯದಲ್ಲಿ ನಗರದ ತಣ್ಣೀರುಹಳ್ಳದ ಸಮೀಪ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುವಾಗ ಹಿಂಬದಿಯಿಂದ ವೇಗವಾಗಿ ಬಂದ ಕಾರು ದಂಪತಿಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಮೂವರು ರಸ್ತೆಯ 20 ಅಡಿ ದೂರಕ್ಕೆ ಹಾರಿ ಬಿದ್ದಿದ್ದಾರೆ. ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದ ಕಾರಣ ಕುಮಾರ್ ಮತ್ತು ಕಾವ್ಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪುಟ್ಟಮ್ಮ ಅವರಿಗೂ ಗಂಭೀರ ಗಾಯವಾಗಿದೆ.

ಕಾರನ್ನು ನಿಲ್ಲಿಸದೆ ಸ್ಥಳದಿಂದ ಪರಾರಿ

ಕೂಡಲೇ ಸ್ಥಳದಲ್ಲಿ ಇದ್ದವರು ಗಾಯಾಳುಗಳನ್ನು ಆಟೋದಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆ ತಲುಪುವ ಮುನ್ನವೇ ತಂದೆ-ಮಗಳು ಪ್ರಾಣ ಬಿಟ್ಟಿದ್ದರು. ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದಂಪತಿಗೆ ಡಿಕ್ಕಿ ಹೊಡೆದ ಕಾರು ಚಾಲಕ, ಕಾರನ್ನು ನಿಲ್ಲಿಸದೆ ಹಾಗೆ ವೇಗವಾಗಿ ಸ್ಥಳದಿಂದ ಪರಾರಿಯಾಗಿರುವುದು ಕಂಡುಬಂದಿದೆ. ಘಟನೆ ಸಂಬಂಧ ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net