ಶನಿ ಮಹಾತ್ಮನ ದರ್ಶನ ಪಡೆದು ಮರಳುತ್ತಿದ್ದ ಬೈಕ್ ಸವಾರರಿಬ್ಬರು ಕಸದ ಲಾರಿಗೆ ಬಲಿ

Accident
Published on

ಮಧುರೆ: ಬೆಂಗಳೂರು ಗ್ರಾಮಾಂತರ ಪ್ರಸಿದ್ಧ ಕ್ಷೇತ್ರ ಮಧುರೆಯ ಶ್ರೀ ಶನಿಮಹಾತ್ಮ ದೇವರ ದರ್ಶನ ಪಡೆದು ಗ್ರಾಮಕ್ಕೆ ಮರಳುತ್ತಿದ್ದ ಬೈಕ್ ಸವಾರರಿಬ್ಬರನ್ನು ಯಮರೂಪಿಯಾಗಿ ಬಂದ ಬಿಬಿಎಂಪಿ ಕಸದ ಲಾರಿ ಬಲಿ ಪಡೆದಿದೆ. ಹುಲಿಕುಂಟೆ ಬಳಿ ಸೋಮವಾರ ಸಂಜೆ ದುರ್ಘಟನೆ ನಡೆದಿದ್ದು, ಈ ಭೀಕರ ದೃಶ್ಯ ಕಂಡು ಸ್ಥಳೀಯರು ಹೌಹಾರಿದ್ದಾರೆ.

ನೆಲಮಂಗಲ ತಾಲೂಕು ಮಣ್ಣೆ ಸಮೀಪದ ಮರಳುಕುಂಟೆ ಗ್ರಾಮದ ಮಾರುತಿ (28), ಮಹೇಶ್ (30) ಮೃತ ದುರ್ದೈವಿಗಳು. ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಕಸದ ಲಾರಿಗಳು ಸರಣಿಯಾಗಿ ಜನರ ಬಲಿ ಪಡೆದಿವೆ. ಗ್ರಾಮಾಂತರ ಜಿಲ್ಲೆಯಲ್ಲೂ ಕಸದ ಲಾರಿಗಳ ಆರ್ಭಟ ಹೆಚ್ಚುತ್ತಿದ್ದು ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ.

ಚಾಲಕನನ್ನು ಬೆನ್ನಟ್ಟಿ ಹಿಡಿದರು: ಅಪಘಾತ ಸಂಭವಿಸಿದ ಬಳಿಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಲು ಯತ್ನಿಸಿದ ಲಾರಿ ಚಾಲಕನನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರು ರಸ್ತೆ ತಡೆ ನಡೆಸಿ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ದೊಡ್ಡಬೆಳವಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net