VIDEO: ಟ್ರಾಫಿಕ್​ನಲ್ಲಿ 6 ತಿಂಗಳ ಮಗುವಿನೊಂದಿಗೆ ಕರ್ತವ್ಯ ನಿರ್ವಹಿಸಿದ ಮಹಿಳಾ ಪೊಲೀಸ್; ಇಲಾಖೆಯ ವಿರುದ್ಧ ಕಿಡಿಕಾರಿದ ನೆಟ್ಟಿಗರು!

#UttarPradesh #FemalePolice #Constable #ViralVideo
Published on

ಉತ್ತರ ಪ್ರದೇಶ: ಸದಾ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಕ್ಷೇತ್ರಗಳಲ್ಲಿ ಪೊಲೀಸ್ ಇಲಾಖೆಯೂ ಒಂದು. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿರುವ ಮಹಿಳಾ ಪೊಲೀಸರಂತೂ ತಮ್ಮ ಮನೆ ಹಾಗೂ ಇಲಾಖೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕಾಗುತ್ತದೆ. ಅಂತೆಯೇ ಮಹಿಳಾ ಪೊಲೀಸರಿಗೆ ಪುಟ್ಟ ಮಕ್ಕಳಿದ್ದರೂ, ಅವರನ್ನು ಬಿಟ್ಟು ಬಂದು ತಮ್ಮ ನಿತ್ಯದ ಕರ್ತವ್ಯ ನಿರ್ವಹಿಸಬೇಕಾದ ಒತ್ತಡ ಇರುತ್ತದೆ.

ಇದೀಗ ಉತ್ತರ ಪ್ರದೇಶದ ಮುರಾದಾಬಾದ್ ಎಂಬಲ್ಲಿ ಮಹಿಳಾ ಪೊಲೀಸ್ ಕಾನ್​​ಸ್ಟೇಬಲ್ ಒಬ್ಬರು ತಮ್ಮ 6 ತಿಂಗಳ ಮಗುವನ್ನು ಎತ್ತಿಕೊಂಡು ಟ್ರಾಫಿಕ್​ನಲ್ಲಿ ಕೆಲಸ ಮಾಡಿದ್ದಾರೆ. ಮಾರ್ಗ ಮಧ್ಯೆ ತಮ್ಮ ಮಗುವಿನೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಮಹಿಳಾ ಪೊಲೀಸ್ ತನ್ನ ಕರ್ತವ್ಯದಲ್ಲಿ ತೋರಿದ ದಕ್ಷತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಪೊಲೀಸ್ ಇಲಾಖೆಯ ವಿರುದ್ಧ ಕಿಡಿಕಾರಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಮುರಾದಾಬಾದ್ ಪೊಲೀಸ್ ಇಲಾಖೆ ಸ್ಪಷ್ಟನೆಯೊಂದನ್ನು ನೀಡಿದೆ. ಮಹಿಳಾ ಪೊಲೀಸ್ ಕಾನ್​​​ಸ್ಟೇಬಲ್ ಈಗಾಗಲೇ ಹತ್ತಿರದ ಠಾಣೆಗೆ ವರ್ಗಾವಣೆಯಾಗಿ ಹೋಗಿದ್ದಾರೆ. ಈ ನಡುವೆ ತಾತ್ಕಾಲಿಕವಾಗಿ ಮಹಿಳಾ ಕಾನ್ಸ್​​ಸ್ಟೇಬಲ್ ಟ್ರಾಫಿಕ್​ನಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿ ಬಂದಿದೆ. ಈ ವೇಳೆ ಅವರು ಮಗುವನ್ನು ಕರೆದುಕೊಂಡು ಬಂದಿದ್ದಾರೆ. ಪ್ರಸ್ತುತ ಇವರು ಪೊಲೀಸ್ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net