

ಶಿವಮೊಗ್ಗ: ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಯುಟಿಪಿ (ತುಂಗಾ ಮೇಲ್ದಂಡೆ ಯೋಜನೆ) ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಎರಡು ಮನೆ ಮತ್ತು ಒತ್ತುವರಿ ಮಾಡಿಕೊಂಡಿದ್ದ ಮನೆಯ ಒಂದು ಕೊಠಡಿಯನ್ನು ಗುರುವಾರ ಹೈಕೋರ್ಟ್ ಆದೇಶದ ಮೇರೆಗೆ ಪೊಲೀಸರ ಬಿಗಿ ಭದ್ರತೆಯಲ್ಲಿ ತೆರವು ಮಾಡಲಾಯಿತು.
ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಚಾನಲ್‌ಗೆ ಹೊಂದಿಕೊಂಡ ಜಾಗವಿದ್ದು ಕೆಲವರು ಅದರಲ್ಲಿ ಮನೆ, ವೃದ್ಧಾಶ್ರಮದ ಶೆಡ್ ಮಾಡಿಕೊಂಡಿದ್ದರು. ಹಲವು ಬಾರಿ ಎಚ್ಚರಿಕೆ ನೀಡಿದರೂ ಅತಿಕ್ರಮಣ ತೆರವು ಮಾಡಿರಲಿಲ್ಲ. ನಾಲ್ಕೈದು ದಿನಗಳ ಹಿಂದೆ ವೃದ್ಧಾಶ್ರಮದ ಹೆಸರಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಶೆಡ್ ಅನ್ನು ಜೆಸಿಬಿ ಮೂಲಕ ತೆರೆವು ಮಾಡಲಾಗಿತ್ತು.
ಉಳಿದ ಎರಡು ಮನೆಗಳಿಗೆ ಗುರುವಾರದವರೆಗೆ ಸ್ವಯಂಪ್ರೇರಿತವಾಗಿ ತೆರವು ಮಾಡಿಕೊಳ್ಳುವಂತೆ ಕಾಲಾವಕಾಶ ನೀಡಲಾಗಿತ್ತು. ಗುರುವಾರ ಬೆಳಗ್ಗೆ ಪೊಲೀಸ್ ಭದ್ರತೆಯಲ್ಲಿ ಯುಟಿಪಿ ಅಧಿಕಾರಿಗಳು ತೆರಳಿ ಮನೆಗಳ ನೆಲಸಮ ಮಾಡಿಸಿದರು. ಈ ವೇಳೆ ಮನೆ ಮಾಲೀಕರು ವಿರೋಧ ಮಾಡಿದರೂ ಅತಿಕ್ರಮಣವಾಗಿದ್ದ ಕಾರಣ ಅಧಿಕಾರಿಗಳು ಮುಲಾಜಿಗೆ ಒಳಗಾಗಲಿಲ್ಲ. ಸಾಮಗ್ರಿಗಳನ್ನು ಹೊರಗಡೆ ತೆಗೆದಿಡಲು ಅವಕಾಶ ನೀಡಿ ಮನೆಗಳನ್ನು ತೆರವುಗೊಳಿಸಿದರು.