

Uttar Pradesh: ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರು ತರಗತಿಯೊಳಗೆ ಮದ್ಯ ಸೇವಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಕರನ್ನು ಸಸ್ಪೆಂಡ್ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ಬುಧವಾರ (ಮೇ.14) ನಡೆದಿದೆ.
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರು ತರಗತಿಯ ಆವರಣದೊಳಗೆ ಮದ್ಯ ಸೇವಿಸುತ್ತಿರುವ ವಿಡಿಯೋವನ್ನು ಅದೇ ಶಾಲೆಯ ವಿದ್ಯಾರ್ಥಿಯ ಪಾಲಕರೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಸನ್‌ಪುರ ಬ್ಲಾಕ್‌ನ ಫಯಾಜ್‌ನಗರ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸುತಾರಿ ಗ್ರಾಮದ ಹತ್ತಿರದ ಶಾಲೆಯ ಮುಖ್ಯೋಪಾಧ್ಯಾಯ ಅರವಿಂದ್ ಕುಮಾರ್ ಮತ್ತು ಮತ್ತೊಬ್ಬ ಮುಖ್ಯೋಪಾಧ್ಯಾಯ ಅನುಪಾಲ್, ಪ್ರತಿದಿನ ಶಾಲಾ ಆವರಣದಲ್ಲಿ ಮಕ್ಕಳ ಮುಂದೆ ಒಟ್ಟಿಗೆ ಮದ್ಯಪಾನ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಎಚ್ಚೆತ್ತ ಶಿಕ್ಷಣ ಇಲಾಖೆ ತಕ್ಷಣವೇ ಆ ಎರಡೂ ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡು ಸಸ್ಪೆಂಡ್ ಮಾಡಿದೆ. (ಏಜೆನ್ಸೀಸ್)