

ನವದೆಹಲಿ: ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರೂ ಲೆಕ್ಕಿಸದೆ ನದಿಯ ಮಧ್ಯದಲ್ಲಿದ್ದ ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ ಇಬ್ಬರು ಯುವತಿಯರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯ ಪೆಂಚ್ ನದಿ ಬಂಡೆಗಳಲ್ಲಿ ಡಿಕ್ಕಿ ಹೊಡೆದುಕೊಂಡು ರುದ್ರರಮಣೀಯವಾಗಿ ಹರಿಯುತ್ತದೆ. ಬೇಸಿಗೆ ಸಂದರ್ಭದಲ್ಲಿ ನೀರು ಕಡಿಮೆ ಇರುತ್ತದೆ. ಆದ್ದರಿಂದ ಜನರು ಇಲ್ಲಿನ ಬಂಡೆಗಳ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ, ಈಗ ಮಳೆಗಾಲ ಆರಂಭವಾಗಿದ್ದು, ನದಿಯಲ್ಲಿ ಯಾವುದೇ ಕ್ಷಣದಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಇದರ ಅರಿವಿದ್ದರೂ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಇಬ್ಬರು ಯುವತಿಯರು ನೀರಿನಲ್ಲಿ ಇಳಿದು ದಡದಿಂದ ಸಾಕಷ್ಟು ದೂರದಲ್ಲಿದ್ದ ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ದುರದೃಷ್ಟವಶಾತ್ ಅವರು ಬಂಡೆಯ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗಲೇ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ, ದಡಕ್ಕೆ ಮರಳಲಾಗದೆ ನಿಂತಲ್ಲೇ ನಿಂತಿದ್ದರು.
ಸ್ನೇಹಿತರು ಸಹಾಯಕ್ಕಾಗಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅಂದಾಜು ಒಂದು ಗಂಟೆ ಕಾರ್ಯಾಚರಣೆ ನಡೆಸಿ, ಹಗ್ಗದ ಸಹಾಯದಿಂದ ಆ ಇಬ್ಬರು ಯುವತಿಯರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದು ರಕ್ಷಿಸಿದರು.