

ಹೊಸದಿಲ್ಲಿ: ಕಳೆದ ತಿಂಗಳು ಗುಜರಾತ್ ವಿಧಾನಸಭೆಗೆ ರಾಜೀನಾಮೆ ನೀಡಿದ್ದ ಆಮ್ ಆದ್ಮಿ ಪಕ್ಷದ ಮಾಜಿ ಶಾಸಕ ಭೂಪೇಂದ್ರ ಭಯಾನಿ ಮತ್ತು ಕಾಂಗ್ರೆಸ್ ಮಾಜಿ ಶಾಸಕ ಚಿರಾಗ್ ಪಟೇಲ್ ಇದೀಗ ಭಾನುವಾರ ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್ ಪಾಟೀಲ್ ಅವರ ಸಮ್ಮುಖದಲ್ಲಿ ಔಪಚಾರಿಕವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.
ಜುನಾಗಢ್‌ನ ವಿಸಾವದರ್ ಕ್ಷೇತ್ರದ ಶಾಸಕ ಭೂಪಾಲ್ ಭಯಾನಿ 2022ರಲ್ಲಿ ಚುನಾವಣೆಗೆ ಮುಂಚಿತವಾಗಿ ಎಎಪಿಗೆ ಬಂದು ಡಿಸೆಂಬರ್ 2023ರ ಮಧ್ಯದಲ್ಲಿ ರಾಜೀನಾಮೆ ಘೋಷಿಸಿದರು. ಆದರೆ ಖಂಭತ್‌ನ ಕಾಂಗ್ರೆಸ್ ಶಾಸಕ ಚಿರಾಗ್ ಪಟೇಲ್ ಡಿಸೆಂಬರ್ 14ರಂದು ರಾಜ್ಯ ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಪಟೇಲ್ ಅವರು ಪಕ್ಷದ ಆಂತರಿಕ ಕಾರ್ಯಚಟುವಟಿಕೆಯನ್ನು ತಮ್ಮ ನಿರ್ಗಮನಕ್ಕೆ ಕಾರಣವೆಂದು ಉಲ್ಲೇಖಿಸಿದ್ದರು.
ರಾಜ್ಯ ನಾಯಕತ್ವವು ತನ್ನ ಮಾರ್ಗವನ್ನು ಸರಿಪಡಿಸದಿದ್ದರೆ ಭವಿಷ್ಯದಲ್ಲಿ ಇನ್ನೂ ಹಲವಾರು ಶಾಸಕರು ಸಹ ರಾಜೀನಾಮೆ ನೀಡಬಹುದು ಎಂದು ಎಚ್ಚರಿಕೆ ಸಂದೇಶ ಸಹ ನೀಡಿದ್ದರು. ಇಬ್ಬರು ನಾಯಕರನ್ನು ಸ್ವಾಗತಿಸಿದ ಸಿಆರ್ ಪಾಟೀಲ್, ಚಿರಾಗ್ ಅವರಿಗೆ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದ ಖಂಭತ್ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ನೀಡುವ ಸುಳಿವು ಕೂಡ ನೀಡಿದರು.
ಗುಜರಾತ್ ವಿಧಾನಸಭೆಗೆ ಸದ್ಯ ನಾಲ್ವರು ಶಾಸಕರು ರಾಜೀನಾಮೆ ನೀಡಿದ್ದು, ಈ ಪೈಕಿ ಇಬ್ಬರು ಮಾಜಿ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಇನ್ನಿಬ್ಬರು ಮಾತ್ರ ಇನ್ನೂ ನಿರ್ಧರಿಸಿಲ್ಲ ಎಂಬುದು ಗಮನಾರ್ಹ. ಭವಿಷ್ಯದಲ್ಲಿ ಈ 4 ಸ್ಥಾನಗಳಿಗೆ ಉಪಚುನಾವಣೆ ನಡೆಯುವ ನಿರೀಕ್ಷೆ ಹೆಚ್ಚಿದೆ. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಪಾಟೀಲ್, ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ಕನಸನ್ನು ಪ್ರಧಾನಿಯವರು ಈಡೇರಿಸಿದ್ದಾರೆ ಮತ್ತು ಇಡೀ ದೇಶ ಅದನ್ನು ನೋಡಿದೆ ಎಂದು ಹೇಳಿದರು.
ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದು, ಮುಂಬರುವ ಚುನಾವಣೆಯಲ್ಲಿ ಎಲ್ಲಾ 26 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲುವಂತೆ ಬಿಜೆಪಿ ರಾಜ್ಯ ಘಟಕವು ಖಚಿತಪಡಿಸುತ್ತದೆ ಎಂದು ಒತ್ತಿ ಹೇಳಿದರು,(ಏಜೆನ್ಸೀಸ್).