ಆಶಿಕಾಗೆ ಆಶಿಕಾ ಪೈಪೋಟಿ; ಒಂದೇ ದಿನ ಎರಡು ಚಿತ್ರಗಳ ಬಿಡುಗಡೆ

Ashika Ranganath 1
Published on

ಬೆಂಗಳೂರು: ಆಶಿಕಾ ರಂಗನಾಥ್​ಗೆ ನಾಳೆ ಶುಕ್ರವಾರ (ನ. 25) ಬಹಳ ಮುಖ್ಯವಾದ ದಿನ. ಏಕೆಂದರೆ, ನಾಳೆ ಆಶಿಕಾ ಅಭಿನಯದ ಒಂದಲ್ಲ, ಎರಡು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಒಂದೇನೋ ಇಶಾನ್ ಅಭಿನಯದ 'ರೆಮೋ', ಇನ್ನೊಂದು ಯಾವುದು ಎಂಬ ಪ್ರಶ್ನೆ ಬರಬಹುದು. ಅದೇ ತಮಿಳಿನ 'ಪಟ್ಟತ್ತು ಅರಸನ್​'.

ಹೌದು, ಕಳೆದ ವರ್ಷವೇ ಆಶಿಕಾ, ತಮಿಳಿನ ಚಿತ್ರವೊಂದರಲ್ಲಿ ನಟಿಸುವ ಸುದ್ದಿಯಾಗಿತ್ತು. ತಮಿಳಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ಸ್​ ನಿರ್ಮಿಸಿರುವ ಈ ಚಿತ್ರದಲ್ಲಿ ಅಥರ್ವಗೆ ನಾಯಕಿಯಾಗಿ ಆಶಿಕಾ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 'ಬಂಗಾರದ ಮನುಷ್ಯ', 'ಬೂತಯ್ಯನ ಮಗ ಅಯ್ಯು' ಮುಂತಾದ ಕ್ಲಾಸಿಕ್​ ಚಿತ್ರಗಳನ್ನು ನಿರ್ದೇಶಿಸಿರುವ ಸಿದ್ಧಲಿಂಗಯ್ಯ ಅವರ ಮೊಮ್ಮಗನಾದ ಅಥರ್ವ, ಈಗ ತಮಿಳು ಚಿತ್ರರಂಗದಲ್ಲಿ ಜನಪ್ರಿಯ ನಟ. ಈ ಚಿತ್ರದಲ್ಲಿ ಅಥರ್ವ ಕಬಡ್ಡಿ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದು, ಆಶಿಕಾ ಸಹ ಇಲ್ಲಿ ಕಬಡ್ಡಿ ಆಟಗಾರ್ತಿಯಾಗಿ ನಟಿಸಿದ್ದಾರೆ ಎಂಬ ಸುದ್ದಿ ಇದೆ.

ಈ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಮುಕ್ತಾಯವಾಗಿದ್ದು, ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎ. ಶರ್ಕುಣಂ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಥರ್ವ ಮತ್ತು ಆಶಿಕಾ ಅಲ್ಲದೆ, ರಾಜ್​ಕಿರಣ್​, ರಾಧಿಕಾ ಶರತ್​ ಕುಮಾರ್​, ರವಿ ಕಾಳೆ ಮುಂತಾದವರು ನಟಿಸಿದ್ದಾರೆ.

ಇನ್ನು, 'ರೆಮೋ' ಚಿತ್ರದಲ್ಲಿ ಆಶಿಕಾ, ಮೋಹನ ಎಂಬ ಸೆಲೆಬ್ರಿಟಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡುಗಾರ್ತಿಯಾದ ಆಕೆ, ನಾಯಕನ ಗೆಳತನದಿಂದ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾಳೆ. ಆ ನಂತರ ಆಕೆಯ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕಥೆ.

ಒಟ್ಟಾರೆ, ಆಶಿಕಾ ಅಭಿನಯದ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುವುದಕ್ಕೆ ಪೈಪೋಟಿ ನಡೆಸಿವೆ. ಈ ಎರಡೂ ಚಿತ್ರಗಳ ಬಗ್ಗೆಯೂ ಆಶಿಕಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ತಮ್ಮ ವೃತ್ತಿಬದುಕಿಗೆ ಇನ್ನೊಂದು ಬ್ರೇಕ್​ ನೀಡುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಈ ಎರಡು ಚಿತ್ರಗಳಲ್ಲಿ ಯಾವ ಚಿತ್ರ ಅವರ ಕೈಹಿಡಿಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net