ಇಬ್ಬರು ಡ್ರಗ್‌ಪೆಡ್ಲರ್‌ಗಳ ಬಂಧನ : ಎರಡು ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ

Published on


ಬೆಂಗಳೂರು: ವಾಟ್ಸ್ ಆ್ಯಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್‌ಗಳನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿ ಸುಮಾರು ಎರಡು ಕೋಟಿ ರೂ. ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡಿದ್ದಾರೆ.
ಹುಲಿಮಂಗಲ ನಿವಾಸಿ ಇಮ್ಯಾನುವೆಲ್ ಆಫಾಮ್(೪೩) ಮತ್ತು ಬಿಂಗಿಪುರದ ಎಸ್‌ಎಲ್‌ವಿ ಲೇಔಟ್ ನಿವಾಸಿ ಉಚ್ಚೇನ್ನಾ ಲಿವಿನಸ್(೩೬) ಬಂಧಿತರು. ಆರೋಪಿಗಳಿಂದ ೮೨.೫೭ ಲಕ್ಷ ರೂ. ಮೌಲ್ಯದ ೬೦೮ ಗ್ರಾಂ ತೂಕದ ೧,೨೮೧ ಎಕ್ಸ್‌ಸ್ಟೇಸಿ ಮಾತ್ರೆಗಳು ಹಾಗೂ ೪೬೩ ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್ ಸೇರಿ ಒಟ್ಟು ೧.೭೧ ಕೆ.ಜಿ. ತೂಕದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಬೇಗೂರು ಕೊಪ್ಪ ರಸ್ತೆಯ ರಾಘವೇಂದ್ರ ವೇ ಬ್ರಿಡ್ಜ್ ಬಳಿ ಇಬ್ಬರು ವಿದೇಶಿಗರು ಮಾದಕವಸ್ತು ಮಾರಾಟಕ್ಕೆ ಪ್ರಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹುಳಿಮಾವು ಠಾಣೆ ಇನ್‌ಸ್ಪೆಕ್ಟರ್ ಸಂದೀಪ್ ಹಾಗೂ ಪಿಎಸ್‌ಐ ಎಸ್.ಮಹೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳು ವ್ಯವಹಾರದ ವೀಸಾ ಪಡೆದು ಒಂದು ವರ್ಷದ ಹಿಂದೆ ಭಾರತಕ್ಕೆ ಬಂದಿದ್ದಾರೆ. ಕಳೆದ ಆರು ತಿಂಗಳಿಂದ ನಗರದಲ್ಲಿ ನೆಲೆಸಿದ್ದರು. ನೈಜೀರಿಯಾದಿಂದ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಿ ಸಂಗ್ರಹಿಸಿಕೊಂಡು ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ ಸೇರಿ ನಗರದ ವಿವಿಧೆಡೆ ಕಾಲೇಜು ವಿದ್ಯಾರ್ಥಿಗಳು, ಮಾದಕ ವ್ಯಸನಿಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ.
ಆನ್‌ಲೈನ್‌ನಲ್ಲಿ ಹಣ ಪಡೆಯುತ್ತಿದ್ದರು:
ಆರೋಪಿಗಳು ವಾಟ್ಸ್‌ಆ್ಯಪ್‌ನಲ್ಲಿ ಸಂಪರ್ಕಿಸುವ ಕಾಲೇಜು ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ಮಾದಕ ವ್ಯಸನಿಗಳೇ ಇವರ ಗ್ರಾಹಕರಾಗಿದ್ದರು. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾದಕವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಗ್ರಾಹಕರಿಂದ ಆನ್‌ಲೈನ್‌ನಲ್ಲಿ ಹಣ ಪಡೆದು ಬಳಿಕ ಮಾದಕವಸ್ತು ತಲುಪಿಸುತ್ತಿದ್ದರು ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ, ವಿದೇಶಿಗರ ಕಾಯ್ದೆ, ಪಾಸ್‌ಪೋರ್ಟ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ನೀಡಿದ ಸುಳಿವು:
ಮಾದಕವಸ್ತು ಸೇವನೆ ಆರೋಪದಡಿ ಇತ್ತೀಚೆಗೆ ಇಬ್ಬರು ಕೇರಳ ಮೂಲದ ವಿದ್ಯಾರ್ಥಿಗಳನ್ನು ಹುಳಿಮಾವು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಇವರ ವಿಚಾರಣೆ ವೇಳೆ ನೈಜೀರಿಯಾ ಮೂಲದ ಈ ಇಬ್ಬರು ಡ್ರಗ್ಸ್ ಪೆಡ್ಲರ್‌ಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net