

ವಿಶಾಖಪಟ್ಟಣ: ಕಳೆದೆರಡು ತಿಂಗಳಲ್ಲಿ ಮೂರು ಅನಿಲ ದುರಂತಗಳಿಗೆ ಸಾಕ್ಷಿಯಾಗಿದೆ ವಿಶಾಖಪಟ್ಟಣ. ಮೂರು ಪ್ರಕರಣಗಳಲ್ಲಿ ಒಟ್ಟು 13 ಜನರು ಮೃತಪಟ್ಟಂತಾಗಿದೆ.
ಮೂರನೇ ಅನಿಲ ದುರಂತದಲ್ಲಿ ಇಬ್ಬರು ಮೃತಪಟ್ಟು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಪರಿಸ್ಥಿತಿ ಬಗ್ಗೆ ವರದಿ ಕೇಳಿರುವ ಸಿಎಂ ಜಗನ್ಮೋಹನ್ ರೆಡ್ಡಿ, ಕಾರ್ಖಾನೆಯನ್ನು ಮುಚ್ಚಲು ಆದೇಶಿಸುವಂತೆ ಜಿಲ್ಲಾಧಿಕಾರಿ ವಿನಯ್ಚಂದ್ಗೆ ಸೂಚಿಸಿದ್ದಾರೆ.
ಇಲ್ಲಿನ ಫರ್ವಾಡಾದ ಫಾರ್ಮಾ ಸಿಟಿಯಲ್ಲಿರುವ ಸೈನಾರ್ ಲೈಫ್ ಸೈನ್ಸ್ಸ್ನ ಔಷಧ ತಯಾರಿಕಾ ಕಾರ್ಖಾನೆಯಲ್ಲಿ ಮಂಗಳವಾರ ಬೆಳಗ್ಗೆ ಬೆಂಜಿನಿಡ್ಯಾಜೋಲ್ ಅನಿಲ ಸೋರಿಕೆಯಾಗಿತ್ತು. ಈ ವೇಳೆ 30- 35 ಜನರು ಅಲ್ಲಿ ಕೆಲಸ ಮಾಡುತ್ತಿದ್ದರು. ದುರಂತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಅಸ್ವಸ್ಥಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಲ್ಲಿ ಒಬ್ಬ ಜೀವನ್ಮರಣ ಸ್ಥಿತಿಯಲ್ಲಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್.ಕೆ. ಮೀನಾ ತಿಳಿಸಿದ್ದಾರೆ.
ಸದ್ಯ ರಾಸಾಯನಿಕ ಅನಿಲ ಕಾರ್ಖಾನೆಯಿಂದ ಹೊರಗೆ ವ್ಯಾಪಿಸಿರಲಿಲ್ಲ. ಹೀಗಾಗಿ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ; ಬೊಜ್ಜು ಇಳಿಸುವ ಔಷಧ ಕರೊನಾವನ್ನು ಕರಗಿಸುತ್ತೆ…!
ಈ ಘಟನೆ ಕಳೆದರಡು ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ ಸಂಭವಿಸಿದ ಮೂರನೇ ಅನಿಲ ದುರಂತವಾಗಿದೆ. ಎರಡು ದಿನಗಳ ಹಿಂದಷ್ಟೇ ಕರ್ನೂಲ್ ಜಿಲ್ಲೆ ನಂದ್ಯಾಲದ ಸ್ಪೈ ಆಗ್ರೋ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿ ಮ್ಯಾನೇಜರ್ ಮೃತಪಟ್ಟಿದ್ದ.