

ಬೆಂಗಳೂರು: ನಗರದಲ್ಲಿ ತೀವ್ರವಾಗಿರುವ ಕರೊನಾ ಸೋಂಕನ್ನು ನಿಯಂತ್ರಣ ಮಾಡಲು ವಾರದಲ್ಲಿ 2 ದಿನ ಲಾಕ್ಡೌನ್ ಜಾರಿಗೊಳಿಸುವಂತೆ ಸರ್ಕಾರಕ್ಕೆ ಬಿಬಿಎಂಪಿ ಸದಸ್ಯರು ಮನವಿ ಮಾಡಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ 70 ವಾರ್ಡ್ಗಳ ಸದಸ್ಯರೊಂದಿಗೆ ಕರೊನಾ ಸೋಂಕು ತಡೆಗಟ್ಟುವ ಕುರಿತು ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಪೋರೇಟರ್ಗಳು ಈ ಒತ್ತಾಯ ಮಾಡಿದ್ದಾರೆ.
ರಾಜಧಾನಿಯಲ್ಲಿ ಭಾನುವಾರದ ಜತೆಗೆ ಶನಿವಾರವೂ ಲಾಕ್ಡೌನ್ ಜಾರಿಗೊಳಿಸುವಂತೆ ಪಾಲಿಕೆ ಸದಸ್ಯರು ಆಗ್ರಹಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ರ್ಚಚಿಸಲಾಗುವುದು ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ಅಶೋಕ್ ತಿಳಿಸಿದರು. ಸೋಂಕು ತಡೆಯಲು ಪಕ್ಷಾತೀತ ಸಹಕಾರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ 70 ವಾರ್ಡ್ಗಳ ಸದಸ್ಯರೊಂದಿಗೆ ಚರ್ಚೆ ನಡೆಸಲಾಗಿದೆ. ಮಂಗಳವಾರ (ಜು.7) ಇತರ ವಾರ್ಡ್ಗಳ ಸದಸ್ಯರೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.
ಗರ್ಭಿಣಿಯರ ಚಿಕಿತ್ಸೆಗೆ ಎರಡು ಆಸ್ಪತ್ರೆ: ಕರೊನಾ ದೃಢಪಟ್ಟ ಅಥವಾ ದೃಢಪಡದ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ಕೇವಲ ಒಂದು ಆಸ್ಪತ್ರೆ ಮೀಸಲಿಡಲಾಗಿದೆ. ಇನ್ನು ಮುಂದೆ ಸೋಂಕಿತ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ಬೆಂಗಳೂರು ಉತ್ತರ ಹಾಗೂ ದಕ್ಷಿಣ ವಲಯಗಳಲ್ಲಿ ಎರಡು ಪ್ರತ್ಯೇಕ ಕೋವಿಡ್ ಆಸ್ಪತ್ರೆಗಳನ್ನು ಮೀಸಲಿಡುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಅಶೋಕ್ ತಿಳಿಸಿದರು.
ಅನುದಾನ ಬಳಸಿ: ಬಿಬಿಎಂಪಿ ಅನುದಾನ ದಲ್ಲಿ ಈಗಾಗಲೇ ಪ್ರತಿ ವಾರ್ಡ್ಗೆ 20 ಲಕ್ಷ ರೂ. ನೀಡಲಾಗಿದೆ. ಅದನ್ನು ಸೀಲ್ಡೌನ್ ಆಗಿರುವ ಪ್ರದೇಶದ ಸ್ವಚ್ಛತೆ, ಸೋಂಕು ನಿವಾರಕ ದ್ರಾವಣ ಸಿಂಪಡಣೆ, ಅಗತ್ಯವಿದ್ದವರಿಗೆ ಔಷಧ ಪೂರೖಕೆ ಮಾಡಲು ಬಳಸಬಹುದು. ಜತೆಗೆ, ಪ್ರತಿ ವಾರ್ಡ್ಗೂ ವೈದ್ಯಕೀಯ ನಿಧಿಯಡಿ 10 ಲಕ್ಷ ರೂ. ಅನುದಾನ ನೀಡಲಾಗಿದೆ. ಈ ಮೊತ್ತವನ್ನು ಆದ್ಯತೆ ಮೇರೆಗೆ ಕರೊನಾ ಸೋಂಕಿತ ಗರ್ಭಿಣಿಯರ ಚಿಕಿತ್ಸೆಗೆ ಬಳಸಬಹುದಾಗಿದೆ ಎಂದರು.
ಜಾಗೃತಿ ಕರಪತ್ರ ಹಂಚಿಕೆ: ಎಲ್ಲ ವಾರ್ಡ್ಗಳಲ್ಲಿ ಪಾಲಿಕೆ ಸದಸ್ಯರ ಭಾವಚಿತ್ರ ಒಳಗೊಂಡ ಹಾಗೂ ಕರೊನಾ ನಿಯಂತ್ರಣ ಕುರಿತ ಜಾಗೃತಿ ಅಂಶಗಳನ್ನು ಹೊಂದಿರುವ ಕರಪತ್ರಗಳನ್ನು ಹಂಚಬೇಕು. ಇದರಲ್ಲಿ ವಾರ್ಡ್ವಾರು ಸೋಂಕು ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೊಬೈಲ್ ಸಂಖ್ಯೆ ನೀಡಬೇಕು. ಸೋಂಕಿನಿಂದ ಗುಣಮುಖರಾದವರಿಂದ ವಿಡಿಯೋ ಮಾಡಿ ಪ್ರಚಾರ ಕೊಡಬೇಕು. ಅಧಿಕಾರಿಗಳು ಮತ್ತು ಪಾಲಿಕೆ ಸದಸ್ಯರು ಸಮನ್ವಯದಿಂದ ಕೆಲಸ ಮಾಡುವಂತೆ ತಿಳಿಸಲಾಗಿದೆ ಎಂದು ಅಶೋಕ್ ಹೇಳಿದರು.
ಕರೊನಾ ನಿಯಂತ್ರಣ ಸಂಬಂಧಿಸಿದಂತೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುತ್ತಿಲ್ಲ. ಹೀಗಾಗಿ, ಸೋಂಕು ನಿಯಂತ್ರಣ ಕಾರ್ಯಕ್ಕೆ ಸಮಸ್ಯೆಯಾಗುತ್ತಿದೆ. ಇನ್ನುಮುಂದೆ ಎಲ್ಲ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಗರ್ಭಿಣಿಯರ ಚಿಕಿತ್ಸೆಗೆ ಆದ್ಯತೆ ನೀಡಲು ಕ್ರಮವಹಿಸಲಾಗಿದೆ. | ಎಂ. ಗೌತಮ್ುಮಾರ್ ಮೇಯರ್
ಅಂತ್ಯಕ್ರಿಯೆ ಬಗ್ಗೆ ಅಗೌರವಕ್ಕೆ ಶಿಸ್ತು ಕ್ರಮ
ಕರೊನಾ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರವನ್ನು ಅಗೌರವದಿಂದ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಹೀಗಾಗಿ, ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಲು ತಂಡ ರಚಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳು ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಲೋಪ ಮಾಡಿದರೆ, ಚಿಕಿತ್ಸೆ ನಿರಾಕರಿಸಿದರೆ ರಾಜ್ಯ ವಿಪತ್ತು ನಿರ್ವಹಣೆ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ರೋಗಿಗಳು ಬಂದರೂ ದಾಖಲಿಸಿಕೊಳ್ಳುವಂತೆ ಸುತ್ತೋಲೆ ಹೊರಡಿಸಲಾಗುವುದು. ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಪ್ರಕರಣ ಎಂದು ಪರಿಗಣಿಸಲಾಗುವುದು ಎಂದು ಅಶೋಕ್ ತಿಳಿಸಿದರು.
ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ
ನಗರದಲ್ಲಿ ಜನರು ಸೋಂಕಿನ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆಗೆ ಬರುತ್ತಾರೆ. ಆದರೆ, ವರದಿ ಬರುವ ವೇಳೆಗೆ ರೋಗಿಗಳು ಉಸಿರಾಟದ ಸಮಸ್ಯೆ ಎದುರಿಸುವ ಪರಿಸ್ಥಿತಿ ಬರುತ್ತಿದೆ. ಆಸ್ಪತ್ರೆಗೆ ಕರೆದೊಯುವ ವೇಳೆಗೆ ಕಾಯಿಲೆ ತೀವ್ರಗೊಂಡು ಸಾವನ್ನಪ್ಪುತ್ತಿದ್ದಾರೆ. 10 ದಿನಗಳ ಹಿಂದೆ ವ್ಯಕ್ತಿಯೊಬ್ಬರು ಕರೊನಾದಿಂದ ಮೃತಪಟ್ಟಿದ್ದು, ಈವರೆಗೂ ಅವರ ಕುಟುಂಬದವರನ್ನು ಪರೀಕ್ಷೆ ಮಾಡಿಲ್ಲ. ಸೋಂಕಿನಿಂದ ಸಾವಿಗೀಡಾದವರ ಶವ ಸಂಸ್ಕಾರ ಸಮಸ್ಯೆಯಾಗುತ್ತಿದೆ. ಗುಂಡಿ ತೋಡಲು ಯಾರೂ ಬರುತ್ತಿಲ್ಲ ಎಂದು ಮಾಜಿ ಮೇಯರ್ ಸಂಪತ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಆಂಬುಲೆನ್ಸ್ ಸಂಖ್ಯೆ ಹೆಚ್ಚಿಸಲು ಚಿಂತನೆ
ನಗರದಲ್ಲಿ ಪ್ರಸ್ತುತ 250 ಆಂಬುಲೆನ್ಸ್ಗಳಿವೆ. ಇದನ್ನು 400ಕ್ಕೆ ಏರಿಕೆ ಮಾಡಿ, ಅದರಲ್ಲಿ ಕರೊನಾ ಸೋಂಕಿತರಿಗೆ ಮತ್ತು ಉಳಿದ ವಾಹನಗಳನ್ನು ಸಾಮಾನ್ಯ ಇತರೆ ಕಾಯಿಲೆಗಳಿಂದ ಬಳಲುವ ರೋಗಿಗಳಿಗೆ ಬಳಕೆ ಮಾಡುವ ಕುರಿತು ವಿಂಗಡಿಸಲಾಗುವುದು. ಆಂಬುಲೆನ್ಸ್ ಕೊರತೆ ಆಗದಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಅಶೋಕ್ ತಿಳಿಸಿದರು.
35 ಕಾಪೋರೇಟರ್ ಮಾತ್ರ ಹಾಜರ್
ಸೋಂಕು ತಡೆಯುವ ನಿಟ್ಟಿನಲ್ಲಿ ಆಯ್ದ 70 ವಾರ್ಡ್ಗಳ ಕಾಪೋ ರೇಟರ್ಗಳನ್ನು ಸೋಮವಾರದ ಸಭೆಗೆ ಕರೆಯಲಾಗಿತ್ತು. ಆದರೆ, 35 ಸದಸ್ಯರಷ್ಟೇ ಭಾಗವಹಿಸಿದ್ದರು. ಸಭೆಯಲ್ಲಿ ಹಲವು ಗಂಭೀರ ವಿಚಾರಗಳು ಚರ್ಚೆಯಾಗಿವೆ. ಅಲ್ಲದೆ, ಜನಪ್ರತಿನಿಧಿಗಳು ಇಂತಹ ಸಂದರ್ಭದಲ್ಲಿ ಸಕ್ರಿಯವಾಗಿ ಕೆಲಸ ಮಾಡುವಂತೆ ಸಚಿವರು ಹಾಗೂ ಶಾಸಕರು ಸಭೆಯಲ್ಲಿ ಮನವಿ ಮಾಡಿದ್ದಾರೆ. ಸಭೆಗೆ ಹಾಜರಾಗದ ಸದಸ್ಯರು ಇಂತಹ ಸಂದರ್ಭದಲ್ಲಿ ಹೇಗೆ ಕೆಲಸ ಮಾಡುತ್ತಾರೆ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳು ಸಹ ಫೀಲ್ಡ್ಗೆ ಇಳಿದು ಕೆಲಸ ಮಾಡಿದಾಗಲೇ ಕರೊನಾ ತಡೆಯಬಹುದು. ಮಾರುಕಟ್ಟೆಗಳಿಂದ ಸೋಂಕು ಹೆಚ್ಚಾಗಿ ಹರಡಿದ ಹಿನ್ನೆಲೆಯಲ್ಲಿ ಅವುಗಳನ್ನು ಮುಚ್ಚಲಾಗಿದೆ. | ಎಸ್.ಆರ್. ವಿಶ್ವನಾಥ್ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ\