

Mother DeadBody: ತಮಗೆ ಜನ್ಮನೀಡಿದ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿರುವ ಸಂಗತಿಯನ್ನು ಅರಿತ ಇಬ್ಬರು ಹೆಣ್ಣಮಕ್ಕಳು, ಅಮ್ಮನ ಸಾವಿನ ಸುದ್ದಿಯನ್ನು ಯಾರೊಬ್ಬರಿಗೂ ತಿಳಿಸದೆ, ತಮ್ಮ ಮನೆಯೊಳಗೆ ಬಚ್ಚಿಟ್ಟು, 9 ದಿನಗಳ ಕಾಲ ಸುಮ್ಮನಿದ್ದ ಭಯಾನಕ ಘಟನೆ ಇದೀಗ ಪೊಲೀಸರನ್ನೇ ಬೆಚ್ಚಿಬೀಳಿಸಿದೆ.
ಅನಾರೋಗ್ಯದಿಂದ ತಾಯಿ ಮೃತಪಟ್ಟಿದ್ದೇ ಆದರೂ ಆಕೆಯ ಅಕಾಲಿಕ ಸಾವಿನ ಬಗ್ಗೆ ಕುಟುಂಬಸ್ಥರಿಗೆ ಮತ್ತು ಅಕ್ಕ-ಪಕ್ಕದವರಿಗೆ ತಿಳಿಸಲು ಹಿಂದೇಟು ಹಾಕಿದ ಇಬ್ಬರು ಪುತ್ರಿಯರು, ದೇಹವನ್ನು ಅಂತಿಮ ಸಂಸ್ಕಾರಕ್ಕೂ ತೆಗೆದುಕೊಂಡು ಹೋಗದೆ, ಮನೆಯಲ್ಲಿದ್ದ ಎರಡು ಕೋಣೆಗಳ ಪೈಕಿ ಒಂದರಲ್ಲಿ ತಾವು ಉಳಿದುಕೊಂಡು, ಮತ್ತೊಂದರಲ್ಲಿ ತಮ್ಮ ತಾಯಿಯ ಮೃತದದೇಹವನ್ನು ಇರಿಸಿರುವುದು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ.
"ತಾಯಿ ಮೃತಪಟ್ಟಿರುವುದು ತಿಳಿದು ಕಂಗಾಲಾದೆವು. ಏನು ಮಾಡಬೇಕೆಂದು ತೋಚಲಿಲ್ಲ. ಅಂತ್ಯಕ್ರಿಯೆಗೆ ಹಣವೂ ಇರಲಿಲ್ಲ. ಮನೆಯಲ್ಲಿ ಅವರನ್ನು ನೋಡಿಕೊಳ್ಳಲು ಯಾರೂ ಕೂಡ ಇರಲಿಲ್ಲ. ಏನು ಮಾಡಬೇಕೆಂದು ನಮಗೆ ತಿಳಿಯಲಿಲ್ಲ. ಇದರೊಂದಿಗೆ, ತಾಯಿಯ ಶವವನ್ನು ಒಂಬತ್ತು ದಿನಗಳ ಕಾಲ ಒಂದು ಕೋಣೆಯಲ್ಲಿ ಇರಿಸಿದ್ದೆವು ಮತ್ತು ಇನ್ನೊಂದು ಕೋಣೆಯಲ್ಲಿ ನಾವಿದ್ದೆವು. ಆ ಒಂಬತ್ತು ದಿನಗಳ ಕಾಲ ಮನೆಯಲ್ಲಿದ್ದ ಬ್ರೆಡ್ ಮತ್ತು ಇತರ ಆಹಾರವನ್ನು ತಿನ್ನುತ್ತಾ ದಿನವನ್ನು ಮುಂದೂಡಿದೆವು. ಆದರೆ, ದೇಹದಿಂದ ಕೆಟ್ಟ ವಾಸನೆ ಬರುತ್ತಿದ್ದಂತೆ, ಮನೆಯಿಂದ ಹೊರಬಂದು ನಮ್ಮ ತಾಯಿ ಮೃತಪಟ್ಟ ವಿಷಯವನ್ನು ನೆರೆಹೊರೆಯವರಿಗೆ ಹೇಳಿದೆವು" ಎಂದು ಮೃತ ಮಹಿಳೆಯ ಪುತ್ರಿಯರು ಹೇಳಿದ್ದಾರೆ.
ತಾಯಿಯ ಅಂತ್ಯಕ್ರಿಯೆಗೆ ಸಹಾಯ ಮಾಡುವಂತೆ ಸ್ಥಳೀಯರಲ್ಲಿ ಬೇಡಿಕೊಂಡ ಹೆಣ್ಣುಮಕ್ಕಳು, ಪರಿಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ. ಈ ದುರಂತ ಘಟನೆ ಸಿಕಂದರಾಬಾದ್‌ನ ವಾರಸಿಗುಡದಲ್ಲಿ ಸಂಭವಿಸಿದೆ ಎಂದು ವರದಿ ಉಲ್ಲೇಖಿಸಿದೆ. ಮೃತ ಮಹಿಳೆಯನ್ನು ಸೀಮಾಲಾ ಶ್ರೀಲಲಿತಾ (45) ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ತನ್ನ ಇಬ್ಬರು ಹೆಣ್ಣುಮಕ್ಕಳಾದ ರಾವಲಿಕಾ ಮತ್ತು ಅಶ್ವಿತಾಳೊಂದಿಗೆ ವರಸಿಗುಡದ ಬೌದ್ಧನಗರದಲ್ಲಿರುವ ಮೂರನೇ ಮಹಡಿಯಲ್ಲಿ ಫ್ಲಾಟ್ನಲ್ಲಿ ವಾಸವಿದ್ದರು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಅವರ ಪತಿ ರಾಜು ಐದು ವರ್ಷಗಳ ಹಿಂದೆ ಕುಟುಂಬವನ್ನು ಬಿಟ್ಟು ಹೋದರು. ಆರ್ಥಿಕ ಬಿಕ್ಕಟ್ಟಿನಿಂದ ರಾವಲಿಕಾ ಮತ್ತು ಅಶ್ವಿತ ಹತ್ತನೇ ತರಗತಿಗೆ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು.
ರಾವಲಿಕಾ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅಶ್ವಿತಾ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಅಡುಗೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರೀಲಲಿತಾ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಜನವರಿ 22ರ ರಾತ್ರಿ ನಿಧನರಾಗಿದ್ದಾರೆ. ತಾಯಿ ತೀರಿಕೊಂಡ ನಂತರ ಇಬ್ಬರು ಹೆಣ್ಣುಮಕ್ಕಳು ಖಿನ್ನತೆಗೆ ಒಳಗಾಗಿದ್ದು, ತಾಯಿಯ ಸಾವಿನ ಬಗ್ಗೆ ಯಾರಿಗೆ ಹೇಳಬೇಕೆಂದು ತಿಳಿಯದೆ, ತಾಯಿಯ ಶವವನ್ನು ಮನೆಯ ಕೋಣೆಯಲ್ಲಿ ಇರಿಸಿದ್ದರು. ಇನ್ನೊಂದು ಕೋಣೆಯಲ್ಲಿ ತಾವು ಉಳಿದಿದ್ದರು. 9 ದಿನಗಳ ಬಳಿಕ ಮೃತದೇಹದಿಂದ ಕೊಳೆತ ವಾಸನೆ ಹೊರಬಂದಿದ್ದೇ ತಡ ಪುತ್ರಿಯರು ಅಕ್ಕ-ಪಕ್ಕದವರಿಗೆ ಘಟನೆ ಬಗ್ಗೆ ವಿವರಿಸಿ, ಅಂತ್ಯಕ್ರಿಯೆಗೆ ಆರ್ಥಿಕ ಸಹಾಯ ಕೋರಿದ್ದಾರೆ.
ಸ್ಥಳೀಯರ ಸಲಹೆಯ ಮೇರೆಗೆ, ಸೀತಾಫಲ್ ಮಂಡಿಯಲ್ಲಿರುವ ಸಿಕಂದರಾಬಾದ್ ಶಾಸಕ ಕ್ಯಾಪ್ ಕಚೇರಿಗೆ ಹೋಗಿ ತನ್ನ ತಾಯಿಯ ಅಂತ್ಯಕ್ರಿಯೆಗೆ ಪುತ್ರಿಯರು ಸಹಾಯ ಕೇಳಿದ್ದಾರೆ. ಅಲ್ಲಿನ ಸಿಬ್ಬಂದಿ ವರಸಿಗುಡ ಪೊಲೀಸರಿಗೆ ಮಾಹಿತಿ ನೀಡಿ, ಸ್ಥಳಕ್ಕೆ ಭೇಟಿ ನೀಡುವಂತೆ ಕೋರಿದ್ದಾರೆ. ತಕ್ಷಣವೇ ಬೌದ್ಧನಗರದಲ್ಲಿ ಶ್ರೀಲಲಿತಾ ವಾಸವಿದ್ದ ಮನೆಗೆ ತೆರಳಿದ ಖಾಕಿ ಪಡೆ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸುಳಿವು ಪತ್ತೆಹಚ್ಚುವ ತಂಡವು ಮನೆಯನ್ನು ಪರಿಶೀಲಿಸಿದ್ದು, ಹೆಚ್ಚಿನ ಮಾಹಿತಿಗಾಗಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).