ಕಿಕ್ಕೇರಿ: ಹೋಬಳಿಯ ಅಂಚೆಬೀರನಹಳ್ಳಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆಯ ಚಿಕ್ಕ ಗಂಡಸಿ ಗ್ರಾಮದ ದರ್ಶನ್(24), ಹಿಂಬದಿ ಸವಾರ ಕಡಹೆಮ್ಮಿಗೆ ಗ್ರಾಮದ ಉಮೇಶ್(25) ಮೃತರು. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ದರ್ಶನ್ ಗೌರಿ-ಗಣೇಶ ಹಬ್ಬಕ್ಕೆ ರಜೆಯಿದ್ದ ಕಾರಣ ಸ್ವಗ್ರಾಮ ಗಂಡಸಿಗೆ ಹಾಗೂ ಈತನ ಸ್ನೇಹಿತ ಕಿಕ್ಕೇರಿ ಹೋಬಳಿಯ ಕಡಹೆಮ್ಮಿಗೆ ಗ್ರಾಮಕ್ಕೆ ಬಂದಿದ್ದರು. ಹಳ್ಳಿಮೈಸೂರು ಬಳಿ ಇರುವ ದೇವಿತಂದ್ರಿ ದೇಗುಲಕ್ಕೆ ಪೂಜೆ ಸಲ್ಲಿಸಲು ಬುಧವಾರ ತೆರಳಿದ್ದರು. ಪೂಜೆ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ರಾತ್ರಿ ವಾಪಸಾಗುವಾಗ ಅಂಚೆಬೀರನಹಳ್ಳಿ ಗ್ರಾಮದ ಬಳಿ ಎದುರಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಕಿಕ್ಕೇರಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಚಾಲಕನನ್ನು ಬಸ್ ಸಮೇತ ವಶಕ್ಕೆ ಪಡೆಯಲಾಗಿದೆ.