

ಮುಂಬೈ: ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರಿಲೈನ್ಸ್ ಸಂಸ್ಥಾಪಕ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ಅದ್ಧೂರಿ ವಿವಾಹ ಸಮಾರಂಭ ಇಂದಿಗೆ ಯಶ್ವಸಿಯಾಗಿ ಅಂತ್ಯಗೊಂಡಿದೆ. ಚಿತ್ರರಂಗದ ಕಲಾವಿದರು, ರಾಜಕೀಯ ಗಣ್ಯರು, ಉದ್ಯಮಿಗಳು ಸೇರಿದಂತೆ ಹೆಸರಾಂತ ವ್ಯಕ್ತಿಗಳು ಅನಂತ್ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ನವಜೋಡಿಗಳಿಗೆ ಶುಭಹಾರೈಸಿದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತ್-ರಾಧಿಕಾ ಮದುವೆ ಸಮಾರಂಭಕ್ಕೆ ಆಹ್ವಾನವಿಲ್ಲದಿದ್ದರೂ ಇಬ್ಬರು ವ್ಯಕ್ತಿಗಳು ಆಗಮಿಸಿರುವುದು ತಿಳಿದುಬಂದಿದೆ. ತಕ್ಷಣವೇ ಇಬ್ಬರನ್ನು ಪ್ರಶ್ನಿಸಿದ ಪೊಲೀಸರು, ಗಣ್ಯರ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದೆ ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ, ಹೋಗಲು ಯತ್ನಿಸಿದ್ದಕ್ಕೆ ಬಂಧಿಸಿದ್ದಾರೆ.
ಪೋಲೀಸರ ಪ್ರಕಾರ, ಆಮಂತ್ರಣವಿಲ್ಲದೆ ಅಂಬಾನಿ ಪುತ್ರನ ವಿವಾಹ ಸಮಾರಂಭಕ್ಕೆ ಪ್ರವೇಶಿಸಲು ಯತ್ನಿಸಿದ ಆರೋಪಿಗಳಲ್ಲಿ ಒಬ್ಬ ವೆಂಕಟೇಶ್ ನರಸಯ್ಯ (26) ಎನ್ನಲಾಗಿದ್ದು, ಈತ ಯೂಟ್ಯೂಬರ್ ಎಂದು ವರದಿಯಾಗಿದೆ. ಮತ್ತೊಬ್ಬ ವ್ಯಕ್ತಿ ಲೂಕಾಮ್ ಮೊಹಮ್ಮದ್ ಶಫಿ ಶೇಖ್ (28) ತನ್ನನ್ನು ತಾನು ಉದ್ಯಮಿ ಎಂದು ಹೇಳಿಕೊಂಡಿದ್ದಾನೆ. ಇವರಿಬ್ಬರು ವಿಶೇಷವಾಗಿ ಗಾಲಾ ಕಾರ್ಯಕ್ರಮವನ್ನು ವೀಕ್ಷಿಸಲು ಆಂಧ್ರಪ್ರದೇಶದಿಂದ ಮುಂಬೈಗೆ ಬಂದಿದ್ದಾರೆ. ಸದ್ಯ ಇವರಿಬ್ಬರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ಗಂಟೆಗಳ ವಿಚಾರಣೆ ಬಳಿಕ ಇಬ್ಬರಿಗೂ ನೋಟಿಸ್ ನೀಡಿದ ಪೊಲೀಸರು, ಪ್ರಕರಣಗಳನ್ನು ದಾಖಲಿಸಿಕೊಂಡು ಕಳಿಸಿದ್ದಾರೆ. ಮುಂದೆ ಇದೇ ರೀತಿ ಎಡವಟ್ಟು ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಕೊಟ್ಟು ಬಿಡುಗಡೆಗೊಳಿಸಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).