

ಭರತ್ಪುರ (ರಾಜಸ್ಥಾನ): ಗುಟ್ಕಾ ತಿಂದು ರಸ್ತೆಯಲ್ಲಿ ಉಗುಳಿದ ಆರೋಪದ ಮೇರೆಗೆ ರಾಜಸ್ಥಾನ ಪೊಲೀಸರು ಇಬ್ಬರನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.
ರಾಜಸ್ಥಾನದ ಉಚ್ಚೈನ್ ನಿವಾಸಿಗಳಾದ ಗುಣೇಶ್ ಮತ್ತು ರಾಜು ಬಂಧಿತರು. ರಾಜಸ್ಥಾನ ಸಾಂಕ್ರಾಮಿಕ ರೋಗ ತಡೆ ಕಾಯ್ದೆ, 1957ರ ಪ್ರಕಾರ ಇವರನ್ನು ಬಂಧಿಸಲಾಗಿದೆ.
ಕೋವಿಡ್ 19 ಹರಡುವಿಕೆ ತಡೆಗಟ್ಟಲು ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಜಾರಿಗೆ ಬಂದ ನಂತರದಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇಬ್ಬರನ್ನು ಬಂಧಿಸಿರುವುದು ರಾಷ್ಟ್ರದಲ್ಲೇ ಮೊದಲು ಎನ್ನಲಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಭರತ್ಪುರ ಎಎಸ್ಪಿ ಸುರೇಶ್ ಖಿಂಚಿ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ. ಈ ನಿಯಮ ಇತ್ತೀಚೆಗಷ್ಟೇ ಜಾರಿಗೆ ಬಂದಿದೆ. ಇದರನ್ವಯ ಲಾಕ್ಡೌನ್ ಉಲ್ಲಂಘಿಸಿ, ಗುಟ್ಕಾ ಜಗಿದು ಸಾರ್ವಜನಿಕ ಸ್ಥಳದಲ್ಲಿ ಉಗುಳಿದ್ದಕ್ಕಾಗಿ ಇವರಿಬ್ಬರನ್ನೂ ಬಂಧಿಸಲಾಗಿತ್ತು. ಸ್ವಲ್ಪಕಾಲ ಜೈಲಿನಲ್ಲಿರಿಸಿ, ನಂತರ ಬಿಟ್ಟು ಕಳುಹಿಸಲಾಯಿತು ಎಂದು ಹೇಳಿದ್ದಾರೆ.