

ಬೆಂಗಳೂರು: ವಕೀಲರೊಬ್ಬರನ್ನು ಅಡ್ಡಗಡ್ಡಿ ಹಲ್ಲೆಗೈದು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಘ್ನೇಶ್ವರನಗರ ನಿವಾಸಿ ಜೀವನ್(೨೬) ಮತ್ತು ಉಲ್ಲಾಳ ಮುಖ್ಯರಸ್ತೆ ನಿವಾಸಿ ನಿತಿನ್(೨೪) ಬಂಧಿತರು. ಆರೋಪಿಗಳಿಂದ ದ್ವಿಚಕ್ರ ವಾಹನ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.
ಶ್ರೀನಿವಾಸನಗರ ನಿವಾಸಿ ವಕೀಲ ಹೇಮಂತ್ ಭಾರಧ್ವಜ್ ಎಂಬುವವರು ಮೇ ೩ರಂದು ರಾತ್ರಿ ಸುಮಾರು ೧೧.೨೦ಕ್ಕೆ ಶ್ರೀನಿವಾಸನಗರದ ಆರಾಧಾನಾ ಗಾರ್ಮೆಂಟ್ಸ್ ಬಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಏಕಾಏಕಿ ಹೇಮಂತ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಹೇಮಂತ್ ಮೇಲೆ ಮನಬಂದಂತೆ ಹಲ್ಲೆಗೈದು ೪೦ ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.