

ಬೆಂಗಳೂರು: ಅಕ್ರಮ ಮತದಾರರ ಸೃಷ್ಟಿಗೆ ಸಚಿವ ಬೈರತಿ ಸುರೇಶ್ ಅವರು ಕಾರಣರು. ಆದ್ದರಿಂದ ಬೈರತಿ ಸುರೇಶ್ ಅವರು ಕೂಡಲೇ ರಾಜೀನಾಮೆ ಕೊಡಬೇಕು. ಅಲ್ಲದೆ, ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರ್ ಅವರ ಆತ್ಮಹತ್ಯೆ ಪ್ರಕರಣ ದಾರಿ ತಪ್ಪದೆ ಇರಲು ಶರಣಪ್ರಕಾಶ ಪಾಟೀಲರು ಕೂಡ ರಾಜೀನಾಮೆ ಕೊಡಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ಆಗ್ರಹಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಈ ಸರಕಾರ ಅನೇಕ ಜನ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸುತ್ತಿದೆ. ಹಣ ಸಂಗ್ರಹದಲ್ಲಿ ಮತ್ತು ಕುಕೃತ್ಯಗಳಲ್ಲಿ ಒಬ್ಬ ಸಚಿವರು ಇನ್ನೊಬ್ಬ ಸಚಿವರನ್ನು ಮೀರಿಸುತ್ತಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾದ ಕೃತ್ಯಗಳನ್ನೂ ಮಾಡುತ್ತಿದ್ದು, ಅದಕ್ಕೆ ಬೈರತಿ ಸುರೇಶ್ ಅವರು ತಾಜಾ ಉದಾಹರಣೆ ಎಂದು ಆಕ್ಷೇಪಿಸಿದರು.
ಬೈರತಿ ಸುರೇಶ್ ಅವರು ಅಕ್ರಮ ಮತದಾರರನ್ನು ಸೃಷ್ಟಿಸಿ ಗೆದ್ದು ಬಂದಿದ್ದಾರೆ. ಸಾವಿರಾರು ನಕಲಿ ಮತದಾರರನ್ನು ಸೃಷ್ಟಿಸಿದ್ದಾರೆ. ನಿನ್ನೆ ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ಎಂಎಸ್‍ಎಲ್ ಟೆಕ್ನೊ ಸೊಲ್ಯೂಷನ್ಸ್‍ನ ಮೌನೇಶ್ ಕುಮಾರ್ ಎನ್ನುವ ಕಿಂಗ್ ಪಿನ್ ಸಿಕ್ಕಿಬಿದ್ದಿದ್ದಾನೆ. ಆಗ ಅಕ್ರಮವಾಗಿ ಮತದಾರರನ್ನು ಸೃಷ್ಟಿಸುವ ಕುಕೃತ್ಯ, ಅಕ್ರಮವಾಗಿ ಫೋಟೊ ಸಂಗ್ರಹಿಸಿ ಆಧಾರ್ ಕಾರ್ಡ್ ಸೃಷ್ಟಿ, ಐಡಿಗಳ ಸೃಷ್ಟಿ, ಸೃಷ್ಟಿಸಿದ ನಕಲಿ ಡಿಎಲ್ ಸಾವಿರಾರು ಸಂಖ್ಯೆಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದರು.
ಬೇರೆ ಬೇರೆ ವಿಳಾಸದಲ್ಲಿ ಒಬ್ಬ ವ್ಯಕ್ತಿಯ ಎರಡು ಮೂರು ಆಧಾರ್ ಕಾರ್ಡ್ ಇರಬಾರದು. ಇದು ಸಂವಿಧಾನಬಾಹಿರ ಕುಕೃತ್ಯ. ಇದರ ಸಮರ್ಪಕ ತನಿಖೆ ಮಾಡಬೇಕು. ಎಷ್ಟು ಸಂಖ್ಯೆಯಲ್ಲಿ ನಕಲಿ ಮತದಾರರನ್ನು ಸೃಷ್ಟಿಸಿದ್ದಾರೆ; ಎರಡು ಮೂರು ಆಧಾರ್ ಕಾರ್ಡ್ ಹೊಂದಿದವರ ಸಂಖ್ಯೆ ಎಷ್ಟು? ಇಂಥ ಎಷ್ಟು ಕೇಂದ್ರಗಳಿವೆ?- ಇದೆಲ್ಲದರ ಸಂಪೂರ್ಣ ತನಿಖೆ ಆಗಬೇಕು. ತನಿಖೆ ಆಗಿ ವರದಿ ಬರುವವರೆಗೆ ಬೈರತಿ ಸುರೇಶ್ ಅವರು ರಾಜೀನಾಮೆ ಕೊಡಬೇಕು. ನಿಷ್ಕಳಂಕ, ಪಾರದರ್ಶಕ, ಪ್ರಭಾವರಹಿತ ತನಿಖೆ ನಡೆಯಲು ಬೈರತಿ ಸುರೇಶ್ ಅವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಮೌನೇಶ್ ಮಗನ ಜತೆ ಬೈರತಿ ಸುರೇಶ್ ಫೋಟೋ ಸಿಕ್ಕಿದೆ ಎಂದೂ ಆರೋಪಿಸಿದರು. ರಾಜ್ಯದಾದ್ಯಂತ ಇಂಥ ಲಕ್ಷಾಂತರ ನಕಲಿ ಮತದಾರರನ್ನು ಸೃಷ್ಟಿಸಿರಬಹುದು. ಆದ್ದರಿಂದ ಈ ವಿಷಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರಲ್ಲದೆ, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಎನ್.ರವಿಕುಮಾರ್ ತಿಳಿಸಿದರು.
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಶಿರೋಳ್ಳಿ ಗ್ರಾಮದ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರ್ ಅವರ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ 12 ಜನರ ತಂಡವು ಶಿರೋಳ್ಳಿ ಗ್ರಾಮಕ್ಕೆ ತೆರಳಲಿದೆ. ಶಿವಕುಮಾರ್ ಪೂಜಾರ್ ಅವರ ಮನೆಗೆ ಭೇಟಿ ನೀಡಿ ಏನಾಗಿದೆ ಎಂಬ ವರದಿಯನ್ನು ತರಲಿದೆ. ಸರಕಾರಕ್ಕೆ ಅದನ್ನು ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ಸಿಐಡಿ ತನಿಖೆ ನಡೆಸುವುದಾಗಿ ಸರಕಾರ ತಿಳಿಸಿದೆ. ಪ್ರಭಾವದ ಕಾರಣದಿಂದ ತನಿಖೆಯ ದಾರಿ ತಪ್ಪಬಾರದು ಎಂಬ ಕಾರಣಕ್ಕೆ ನಾಳೆಯೇ ನಾವು ತೆರಳುತ್ತೇವೆ ಎಂದು ಎನ್.ರವಿಕುಮಾರ್ ವಿವರಿಸಿದರು.