ದ್ವಾದಶ ರಾಶಿ ಫಲ: ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ

ವಿಜಯವಾಣಿ (7)
Published on

ಮೇಷ: ನೂತನ ಸಂವತ್ಸರದ ಯುಗಾದಿಯಿಂದ ಮೇ-ಜೂನ್​ವರೆಗೆ ಧನ ಲಾಭ, ಶುಭ ಕಾರ್ಯಗಳು, ಆರೋಗ್ಯದಲ್ಲಿ ಸುಧಾರಣೆ, ಕೀರ್ತಿ ವೃದ್ಧಿ ಇತ್ಯಾದಿ ಶುಭಫಲಗಳನ್ನು ಕಾಣುವಿರಿ. ಮೇ ನಂತರ ರಾಹು ಗ್ರಹಚಾರದಿಂದ ಅಧಿಕ ಧನಲಾಭವನ್ನು ಕಾಣುವಿರಿ. ಪತ್ನಿಯ ಅನಾರೋಗ್ಯ ಕಳೆದು ಗುಣಮುಖರಾಗಿ, ಸಂತೋಷಭರಿತ ಜೀವನ. ಆಧ್ಯಾತ್ಮಿಕ ಒಲವು. ಇತ್ಯಾದಿ ಶುಭಫಲಗಳನ್ನು ಅನುಭವಿಸುವಿರಿ. ಯುಗಾದಿ ಹಬ್ಬದ ಪ್ರಾರಂಭದಲ್ಲಿ ಸಾಡೇಸಾತಿ ಶನೇಶ್ಚರನ ಪ್ರವೇಶದ ಕಾರಣ ನಿಮ್ಮ ಯತ್ನ ಕಾರ್ಯಗಳಿಗೆ ವಿಘ್ನಗಳು, ಅನಾರೋಗ್ಯ, ಮಾನಸಿಕ ಚಿಂತೆ ಉಂಟಾಗುವುದು.

ಪರಿಹಾರ: ಶ್ರೀಗುರು ಚರಿತ್ರೆ ಪಾರಾಯಣ, ಮಂತ್ರಾಲಯ ಗುರು ಕ್ಷೇತ್ರದರ್ಶನ, ನಿತ್ಯ ಹನುಮಾನ್ ಸ್ತೋತ್ರ ಪಠಣ, ಕಾಲಭೈರವನ ಸೇವೆ, ಶಿವಾಲಯದಲ್ಲಿ ಪ್ರದೋಷ ಪೂಜೆ, ಎಳ್ಳೆಣ್ಣೆ ದಾನ.

ವೃಷಭ: ಗುರುವು ಮಿಥುನ ರಾಶಿಯಲ್ಲಿ ಸಂಚರಿಸುವಾಗ ಶುಭದಾಯಕ ಆಗಿರುವುದರಿಂದ ಆರೋಗ್ಯದಲ್ಲಿ ಸುಧಾರಣೆ, ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ, ಐಶ್ವರ್ಯಪ್ರಾಪ್ತಿ, ವಿವಾಹಾರ್ಥಿಗಳಿಗೆ ಕಂಕಣ ಭಾಗ್ಯ ಹಾಗೂ ಸ್ತ್ರೀ ಸುಖಗಳು ಉಂಟಾಗುತ್ತವೆ. ಗೃಹದಲ್ಲಿ ದೇವತಾಕಾರ್ಯಗಳು ಜರುಗುವುದು. ಶನೇಶ್ಚರನು ಮೀನ ರಾಶಿಯಲ್ಲಿ ಸಂಚರಿಸುವಾಗ ಶುಭದಾಯಕನಾಗಿದ್ದು ಸರ್ಕಾರಿ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿ, ಕೃಷಿಕರಿಗೆ ಉತ್ತಮ ಫಸಲು ಹಾಗೂ ಬೆಲೆ ದೊರೆತು ಸಂತೋಷಿಗಳಾಗುವರು. ರಾಹು ಕುಂಭ ರಾಶಿಯಲ್ಲಿ ಸಂಚರಿಸುವಾಗ ನಿದ್ರಾ ಹೀನತೆ, ಪತಿ-ಪತ್ನಿಯರಲ್ಲಿ ವಿರಸ ಏರ್ಪಡುವುದು.

ಪರಿಹಾರ: ಆದಿತ್ಯ ಹೃದಯ ಪಾರಾಯಣ, ಗಣಪತಿಗೆ ಗರಿಕೆಯಿಂದ ಅರ್ಚನೆ-ಸೇವೆ, ಶಿವಾಲಯದಲ್ಲಿ ಕಬ್ಬಿನ ರಸದಿಂದ ರುದ್ರಾಭಿಷೇಕ, ಗುರುಗಳ ಸೇವೆ.

ಮಿಥುನ: ಮೇ 2025ರಿಂದ ಕೇತು ಸಿಂಹ ಪ್ರವೇಶದಿಂದ ಶುಭಫಲಗಳನ್ನೇ ನೀಡುತ್ತಾನೆ. ಶತ್ರು ಮೇಲಿನ ಜಯ. ಧನಲಾಭ. ಯಶಸ್ಸು, ಖ್ಯಾತಿ, ಧೈರ್ಯ ನೀಡುತ್ತಾನೆ. ಗುರು ಗ್ರಹವು ಮಿಥುನ ಮತ್ತು ಕರ್ಕಾಟಕ ರಾಶಿಯಲ್ಲಿ ಸಂಚರಿಸುವಾಗ ಮಿಶ್ರ ಫಲಗಳಿಂದ ಆರೋಗ್ಯ ಸುಧಾರಣೆ, ಕೀರ್ತಿ ವೃದ್ಧಿ. ಅವಿವಾಹಿತರಿಗೆ ವಿವಾಹಯೋಗ. ಶನೇಶ್ಚರನು ಮೀನ ರಾಶಿಯಲ್ಲಿ ಸಂಚರಿಸುವುದರಿಂದ ದುಷ್ಟ ಜನರಿಂದ ತೊಂದರೆ, ಉದ್ಯೋಗದಲ್ಲಿ ಅಭಿವೃದ್ಧಿ ಕುಂಠಿತ, ಕುಟುಂಬದಲ್ಲಿ ಅನಾರೋಗ್ಯ, ಸರ್ಕಾರಿ ಅಧಿಕಾರಿಗಳು ಅಪವಾದ ಹಾಗೂ ಕಾನೂನು ವಿಚಾರಣೆ ಎದುರಿಸಬೇಕಾಗುವುದು.

ಪರಿಹಾರ: ವಿಷ್ಣು ಸಹಸ್ರನಾಮ, ಕಪ್ಪು ಗೋಸೇವೆ, ವೃದ್ಧಾಶ್ರಮಗಳಲ್ಲಿ ಅನ್ನದಾನ, ಗುರುವಾಯೂರ್ ಕ್ಷೇತ್ರ ದರ್ಶನ.

ಕಟಕ: ಗುರುವು ವೃಷಭ ರಾಶಿಯಲ್ಲಿ ಸಂಚರಿಸುವಾಗ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಆರೋಗ್ಯದಲ್ಲಿ ಸುಧಾರಣೆ, ಬಂಧುಮಿತ್ರರಿಂದ ಸಹಾಯ, ಸತ್ಕರ್ಮ ಆಸಕ್ತಿ ಮೊದಲಾದ ಶುಭ ಲಾಭಗಳು ಉಂಟಾಗುವುವು. ಗುರುವು ಮಿಥುನ ರಾಶಿಯಲ್ಲಿ ಸಂಚರಿಸುವಾಗ ಗೃಹ ಆರಂಭ, ನಿವೇಶನ ಖರೀದಿ, ಗೃಹದಲ್ಲಿ ಮಂಗಳ ಕಾರ್ಯ. ಕಳೆದ ಎರಡೂವರೆ ವರ್ಷಗಳ ಕಾಲ ಅಷ್ಟಮ ಶನೇಶ್ಚರನ ಸಂಚಾರ ಕಾಲದಲ್ಲಿ ಅನುಭವಿಸಿದ ಕಷ್ಟನಷ್ಟಗಳು ಸ್ವಲ್ಪ ದೂರವಾಗಿ, ಧನಾತ್ಮಕ ಚಿಂತನೆಗಳು ಪ್ರಾರಂಭವಾಗುವ ಸಮಯ. ನವಮ ಶನಿ ಸಂಚಾರವು ಮಿಶ್ರ ಫಲಗಳಿಂದ ಕೂಡಿರುವುದು. ರಾಹುವಿನ ಕುಂಭ ಸಂಚಾರ ಕಾಲದಲ್ಲಿ ಅನವಶ್ಯಕ ವೆಚ್ಚಗಳು, ನಂಬಿದವರಿಂದ ಮೋಸವಾಗುವ ಸಂಭವ.

ಪರಿಹಾರ: ಗ್ರಾಮದೇವತೆ ಸೇವೆ, ಶೃಂಗೇರಿ ಗುರುಗಳ ದರ್ಶನ, ಶಮೀವೃಕ್ಷ ಪ್ರದಕ್ಷಿಣೆ, ಅಷ್ಟಮಿಯಲ್ಲಿ ಕಾಲಭೈರವನ ಸೇವೆ, ದುರ್ಗಾ ಸಪ್ತಶತಿ ಪಾರಾಯಣ.

ಸಿಂಹ: ಗುರುವು ವೃಷಭ ರಾಶಿಯಲ್ಲಿ ಸಂಚರಿಸುವಾಗ ಕೃಷಿಯಲ್ಲಿ ಅಲ್ಪ ಫಲ, ಮನಸ್ಸಿಗೆ ನಾನಾ ರೀತಿಯ ಚಿಂತೆ, ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಲಾಭ. ಮೇ ತಿಂಗಳ ನಂತರ ಗುರು ಮಿಥುನ ರಾಶಿಯಲ್ಲಿ ಸಂಚರಿಸುವಾಗ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಧನಲಾಭ. ಕಾರ್ಯಸಿದ್ಧಿ. ಗೃಹ, ನಿವೇಶನ ಖರೀದಿಸಲು ಗುರುಕೃಪೆ ಇದೆ. ನೂತನ ಸಂವತ್ಸರ ದಿನದಂದೇ ಅಷ್ಟಮ ಶನಿ ಪ್ರಾರಂಭ ಆಗುವುದರಿಂದ ಪ್ರಯತ್ನಪೂರ್ವಕವಾಗಿ ಮಾಡಿದ ಕೆಲಸಗಳಲ್ಲಿ ಭಂಗ ಉಂಟಾಗುವುದು. ಶನೇಶ್ಚರನು ಮೀನ ರಾಶಿಯಲ್ಲಿ ಸಂಚರಿಸುವಾಗ ಅಶುಭದಾಯಕ ನಾಗಿದ್ದು ವ್ಯಾಪಾರ ವ್ಯವಹಾರಗಳಲ್ಲಿ ತೊಂದರೆ. ಸರ್ಕಾರಿ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ವಿಘ್ನ. ರಾಹು, ಕೇತುಗಳ ಸಂಚಾರದಿಂದ ಗುರುತಿಸಲಾಗದ ಕಾಯಿಲೆಗಳು.

ಪರಿಹಾರ: ಗಣಪತಿಗೆ ಗರಿಕೆ, ಹನುಮಾನ್ ಸೇವೆ, ನಾಗದೇವತಾ ಪೂಜೆ, ಕುಕ್ಕೆ ಶ್ರೀ ಸುಬ್ರಮ್ಮಣ್ಯ ಕ್ಷೇತ್ರ ದರ್ಶನ, ಸೇವೆ.

ಕನ್ಯಾ: ವೃಷಭ ಮತ್ತು ಕರ್ಕಾಟಕ ರಾಶಿಯಲ್ಲಿ ಗುರುವು ಸಂಚರಿಸುವಾಗ ಶುಭ ಫಲದಾಯಕನಾಗಿದ್ದು ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ, ಕುಟುಂಬದಲ್ಲಿ ಶುಭಕಾರ್ಯಗಳು, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ ಫಲಗಳುಂಟಾಗುತ್ತವೆ. ಗುರುವು ಮಿಥುನ ರಾಶಿಯಲ್ಲಿ ಸಂಚರಿಸುವಾಗ ಮನಸ್ಸಿಗೆ ಚಿಂತೆ, ಅಧಿಕ ಖರ್ಚು, ವ್ಯವಹಾರಗಳಲ್ಲಿ ಅಡಚಣೆ ಇತ್ಯಾದಿ ಫಲಗಳನ್ನು ನೀಡುವ ಸಂಭವವಿದೆ. ಶನೇಶ್ಚರನು ಮೀನ ರಾಶಿಯಲ್ಲಿ ಸಂಚರಿಸುವಾಗ ವ್ಯರ್ಥ ಧನಹಾನಿ, ಅನಾರೋಗ್ಯ, ಮನಸ್ಸಿಗೆ ಬೇಸರ. ರಾಹು ಕುಂಭ ರಾಶಿಯಲ್ಲಿ ಸಂಚರಿಸುವಾಗ ವಿವಿಧೆಡೆಯಿಂದ ಧನಲಾಭ, ಸಮಾಜದಲ್ಲಿ ಕೀರ್ತಿ ಗೌರವ ಉಂಟಾಗುವುದು. ಸಿಂಹ ಕೇತುವಿನಿಂದ ಆಧ್ಯಾತ್ಮಿಕ ಜೀವನದ ಕಡೆ ಹೆಚ್ಚಿನ ಒಲವು.

ಪರಿಹಾರ: ಬನ್ನಿಮರದ ಪ್ರದಕ್ಷಿಣೆ, ಬಾಲ ತ್ರಿಪುರ ಸುಂದರಿ ದೇವಿ ಆರಾಧನೆ, ಗಾಣಗಾಪುರ ಕ್ಷೇತ್ರ ದರ್ಶನ, ಸುಂದರಕಾಂಡ ಪಠಣ.

ತುಲಾ: ದೈವ ಗುರು ಬೃಹಸ್ಪತಿ ಮೇ ನಂತರ ಭಾಗ್ಯದಲ್ಲಿ ಚಲಿಸುತ್ತಿದ್ದು ಗೃಹದಲ್ಲಿ ಸುಖ ಸಂತೋಷಗಳು, ಸಂತಾನಭಾಗ್ಯದ ಸಂಭ್ರಮ, ವಿವಾಹಾಕಾಂಕ್ಷಿಗಳಿಗೆ ಸೂಕ್ತ ಬಾಳಸಂಗಾತಿ ದೊರೆಯುವುದು. ಗುರುವು ಪ್ರಾರಂಭದಲ್ಲಿ ಹಾಗೂ ಅಕ್ಟೋಬರ್ ತಿಂಗಳಲ್ಲಿ ವೃಷಭ ಮತ್ತು ಕಟಕ ರಾಶಿಯಲ್ಲಿ ಸಂಚರಿಸುವಾಗ ಚೋರ ಭೀತಿ, ಅಗ್ನಿ ಭೀತಿ, ಮನಸ್ಸಿಗೆ ಚಿಂತೆ ಉಂಟಾಗುವುದು. ಡಿಸೆಂಬರ್ ನಂತರ ಗುರುವು ಮಿಥುನ ರಾಶಿಯಲ್ಲಿ ಚಲಿಸುವುದರಿಂದ ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ, ಮನೆಯಲ್ಲಿ ಶುಭ ಕಾರ್ಯಗಳು ನಡೆಯುವುವು. ಶನಿ ಮಹಾತ್ಮನು ಷಷ್ಠದಲ್ಲಿ ಸಂಚರಿಸುವಾಗ ಋಣಮುಕ್ತರಾಗಿ ನೂತನ ಯೋಜನೆಗಳಿಗೆ ಪ್ರಯತ್ನಿಸುವಿರಿ. ಪಂಚಮ ರಾಹು ಲಾಭ ಕೇತು, ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ, ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು,

ಪರಿಹಾರ: ರಾಹು ಶಾಂತಿ, ಕುಕ್ಕೆ ಶ್ರೀ ಸುಬ್ರಮ್ಮಣ್ಯ ದರ್ಶನ, ದೇವಿ ಆರಾಧನೆ, ಗಣಪತಿಗೆ ಗರಿಕೆ, ಅರ್ಚನೆ.

ವೃಶ್ಚಿಕ: ವೃಷಭ ಮತ್ತು ಕಟಕ ರಾಶಿಗಳಲ್ಲಿ ಗುರುವು ಸಂಚರಿಸುವಾಗ ಉತ್ತಮ ಫಲದಾಯಕನಾಗಿದ್ದು ಉದ್ಯೋಗದಲ್ಲಿ ಪ್ರಗತಿ, ಯತ್ನಕಾರ್ಯಾನುಕೂಲ, ಕುಟುಂಬ ಸೌಖ್ಯ ಮೊದಲಾದ ಶುಭಫಲಗಳು ಕಂಡುಬರುತ್ತವೆ. ಗುರು ಮಿಥುನದಲ್ಲಿ ಮೇ 14ರಿಂದ ಅಕ್ಟೋಬರ್ 18ರವರೆಗೆ ಚಲಿಸುವುದರಿಂದ ಅಷ್ಟಮ ಗುರು ಅವಧಿಯಲ್ಲಿ ಅನಾರೋಗ್ಯ, ದುಃಖ ಪ್ರಸಂಗಗಳು ಸಂಭವಿಸಬಹುದು. ಮೇವರೆಗಿನ ಗುರು ಸಂಚಾರ ಕಾಲದಲ್ಲಿ ಧನಲಾಭ ಖ್ಯಾತಿ, ಅವಿವಾಹಿತರಿಗೆ ಕಂಕಣಭಾಗ್ಯ, ಸಂತಾನಭಾಗ್ಯ, ವಿದೇಶ ಪ್ರವಾಸ ಇತ್ಯಾದಿ ಶುಭಫಲಗಳನ್ನು ಕಾಣಬಹುದು. ಮೀನರಾಶಿಯಲ್ಲಿ ಶನೇಶ್ಚರನ ಸಂಚಾರ, ಸರ್ಕಾರ ಸಂಬಂಧದ ಕೆಲಸ ಕಾರ್ಯಗಳಲ್ಲಿ ವಿಘ್ನ, ಕೋರ್ಟ್ ವ್ಯವಹಾರಗಳಲ್ಲಿ ಅಪಜಯ. ರಾಹು- ಕೇತುಗಳ ಪ್ರಭಾವದಿಂದಾಗಿ ಭಯದ ವಾತಾವರಣ, ಹಣದ ಹೂಡಿಕೆಯಲ್ಲಿ ಜಾಗೃತರಾಗಿರಬೇಕು.

ಪರಿಹಾರ: ಶ್ರೀ ನರಸಿಂಹ ದೇವರ, ಶ್ರೀ ಸುಬ್ರಮಣ್ಯ ದೇವರ ಸೇವೆ, ಪೂಜೆ, ಹರಿವಾಯುಸ್ತುತಿ/ ಸುಂದರಕಾಂಡ ಪಠಣ, ಗಾಣಗಾಪುರ ದರ್ಶನ, ದತ್ತ ಚರಿತ್ರೆ ಪಾರಾಯಣ.

ಧನಸ್ಸು: ಗುರುವು ಮಿಥುನ ರಾಶಿಯಲ್ಲಿ ಸಂಚರಿಸುವಾಗ ಕುಟುಂಬದಲ್ಲಿ ಸೌಖ್ಯ, ಉದ್ಯೋಗದಲ್ಲಿ ಪ್ರಗತಿ, ಯತ್ನ ಕಾರ್ಯಾನುಕೂಲ, ಶುಭ ಕಾರ್ಯಗಳು ನಡೆಯುವಿಕೆ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಮೊದಲಾದ ಶುಭಫಲಗಳನ್ನು ನಿರೀಕ್ಷಿಸಬಹುದು. ವಿವಾಹಯೋಗ್ಯರಿಗೆ ಕಂಕಣ ಬಲವಿರುವುದು. ಕಾಲ ಕರ್ಮ ಕಾರಣಗಳು ಕೂಡಿ ಬಂದಿದ್ದು ಕೈ ಹಾಕಿದ ಕೆಲಸಗಳಲ್ಲಿ ವಿಜಯವನ್ನು ಸಾಧಿಸುವಿರಿ. ಗುರುವು ವೃಷಭ ಕಟಕ ರಾಶಿಯಲ್ಲಿ ಸಂಚರಿಸುವಾಗ ಅಶುಭದಾಯಕನಾಗಿದ್ದು ಹಣದ ಅಡಚಣೆ, ಅನಾರೋಗ್ಯ. ಶನಿ ಭಗವಾನರು ಮೀನ ರಾಶಿಯಲ್ಲಿ ಸಂಚರಿಸುವಾಗ ಯತ್ನ ಕಾರ್ಯಗಳಲ್ಲಿ ವಿಘ್ನ, ಮನಸ್ಸಿಗೆ ವ್ಯಥೆ. ರಾಹು-ಕೇತುಗಳ ಸಂಚಾರದಿಂದಾಗಿ ವಿವಿಧೆಡೆಯಿಂದ ಧನಲಾಭ, ಆರ್ಥಿಕ ಲಾಭ, ಉನ್ನತ ಪದವಿ. ಕೇತು ಗ್ರಹದಿಂದ ತಂದೆ-ಮಾವನಿಗೆ ಆರೋಗ್ಯದಲ್ಲಿ ತೊಂದರೆ.

ಪರಿಹಾರ: ಶ್ರೀ ಮೃತ್ಯುಂಜಯ ಮಂತ್ರ ಜಪ, ಮಂತ್ರಾಲಯ ಪ್ರಭುಗಳ ಸೇವೆ, ಗಣಪತಿ ಆರಾಧನೆ.

ಮಕರ: ಸಾಡೇಸಾತಿಯಲ್ಲಿ ಬೆಂದ ನೀವು ಹೊರಬರುವ ಕಾಲ. ಗುರುವು ವೃಷಭ ಮತ್ತು ಕಟಕ ರಾಶಿಯಲ್ಲಿ ಸಂಚರಿಸುವಾಗ ಶುಭಫಲದಾಯಕನಾಗಿದ್ದು ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ, ಸಜ್ಜನ ಸಹವಾಸದಿಂದ ಕೀರ್ತಿ, ಸತ್ಕರ್ಮ ಆಸಕ್ತಿ, ಕುಟುಂಬ ಸೌಖ್ಯ, ಧನಾಗಮ, ಶುಭ ಕಾರ್ಯಯತ್ನ ಸಫಲ, ಮನಸ್ಸಿಗೆ ನೆಮ್ಮದಿ ಕಾಣಬಹುದು. ಆದರೆ ಗುರುವು ಮಿಥುನ ರಾಶಿಯಲ್ಲಿ ಸಂಚರಿಸುವಾಗ ಹಣದ ಅಡಚಣೆ, ಅನಾರೋಗ್ಯ, ಸಾಲ ಮಾಡಬೇಕಾದ ಸಂದರ್ಭಗಳು ಉಂಟಾಗಲಿವೆ. ಸಂತಾನಭಾಗ್ಯ, ಕಂಕಣಭಾಗ್ಯ, ಮಕ್ಕಳಿಂದ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಶುಭ ಸಮಯ. ಶ್ರೀ ಶನಿದೇವನು ವಿಕ್ರಮಭವ ಮೀನ ರಾಶಿಯಲ್ಲಿ ಪರಿಭ್ರಮಿಸುವ ಕಾರಣ ಗುರು ಗ್ರಹದಿಂದಾಗುವ ಅಶುಭ ಫಲಗಳನ್ನು ತಗ್ಗಿಸುತ್ತಾನೆ. ಸಾಡೇಸಾತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆರೋಗ್ಯ ಕರುಣಿಸಿ ಉತ್ತಮ ಆರೋಗ್ಯ ದೊರೆಯಲಿದೆ.

ಪರಿಹಾರ: ಗುರು ಚರಿತ್ರೆ ಪಠಣ, ಕುಲಗುರುಗಳ ದರ್ಶನ, ಸೇವೆ ಮಾಡಿ. ಗಣಪತಿ ಆರಾಧನೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೇವೆ ಮಾಡಿ. ಹನುಮಾನ್ ಚಾಲೀಸಾ ಪಠಿಸಿ.

ಕುಂಭ: ಉಪಕಾರಿಗಳಿಂದ ಕುಂಭ ರಾಶಿಯವರಿಗೆ ದೇವಗುರು ಪಂಚಮ ಭಾವದಲ್ಲಿ ಚಲಿಸಲಿದ್ದು ಗುರು ಹಿರಿಯರ ಆಶೀರ್ವಾದದೊಂದಿಗೆ ವಿವಾಹಾದಿ ಶುಭಕಾರ್ಯಗಳು ನಡೆಯುವುದು, ವ್ಯಾಪಾರ ವ್ಯವಹಾರದಲ್ಲಿ ಕೀರ್ತಿ, ಗೌರವಗಳು ದೊರೆಯುವುವು. ಗುರು ಕಟಕ ರಾಶಿಯ ಸಾಧಾರಣ ಲಾಭ, ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ತೊಂದರೆ, ಮನಸ್ಸಿಗೆ ಚಿಂತೆ ಉಂಟಾಗುವುದು. ಶನಿಭಗವಾನರು ಮೀನ ರಾಶಿಯಲ್ಲಿ ಸಂಚರಿಸುವಾಗ ಅಶುಭದಾಯಕನಾಗಿದ್ದು ಸಲ್ಲದ ಅಪವಾದ, ವೃಥಾ ತಿರುಗಾಟ. ಸಮುದ್ರ ಸ್ನಾನದಿಂದ ಶರೀರದಲ್ಲಿ ವಿದ್ಯುತ್ ಕಾಂತಿ ಹರಿಯುವುದು. ರಾಹು-ಕೇತುಗಳ ಪ್ರಭಾವದಿಂದ ಬಗೆಹರಿಸಲಾಗದ ಸಮಸ್ಯೆಗಳು ಉಂಟಾಗುವುವು. ಗುರುತಿಸಲಾಗದ ಶರೀರ ಬಾಧೆಗಳು, ಮಾನಸಿಕ ನೋವುಗಳು ಇತ್ಯಾದಿ.

ಪರಿಹಾರ: ವೃದ್ಧಾಶ್ರಮದಲ್ಲಿ ಕುಡಿಯುವ ನೀರಿನೊಂದಿಗೆ ಅನ್ನದಾನ, ಕುಲದೇವತಾ ಆರಾಧನೆ, ಮಂತ್ರಾಲಯ ಕ್ಷೇತ್ರ ದರ್ಶನ, ಹನುಮಾನ್ ಸೇವೆ.

ಮೀನ: ಗುರುವು ಕಟಕ ರಾಶಿಯಲ್ಲಿ ಸಂಚರಿಸುವಾಗ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ, ಸಜ್ಜನ ಸಹವಾಸ, ಕುಟುಂಬದಲ್ಲಿ ನೆಮ್ಮದಿ, ಧನಾಗಮ ಮೊದಲಾದ ಶುಭ ಫಲಗಳನ್ನು ಅನುಭವಿಸುವಿರಿ. ವೃಷಭ ಮಿಥುನ ರಾಶಿಗಳಲ್ಲಿ ಗುರುವು ಸಂಚರಿಸುವಾಗ ಅಶುಭನಾಗಿದ್ದು ಮನಸ್ಸಿಗೆ ನಾನಾ ರೀತಿಯ ಚಿಂತೆ, ಕೆಲಸ ಕಾರ್ಯಗಳಲ್ಲಿ ಅಡಚಣೆ ಇತ್ಯಾದಿ ಫಲಗಳು. ಶನೇಶ್ಚರನು ನಿಮ್ಮ ಜನ್ಮರಾಶಿಗೆ ಪ್ರವೇಶ ಮಾಡುವ ಪರಿಣಾಮ (ಜನ್ಮ ಶನಿ) ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಘ್ನ. ರಾಹು-ಕೇತುಗಳಿಂದಾಗಿ ವಿವಿಧೆಡೆಯಿಂದ ಧನಲಾಭ.

ಪರಿಹಾರ: ಶಿವನಿಗೆ ರುದ್ರಾಭಿಷೇಕ, ಬಡವರ ಸೇವೆ, ಎಳ್ಳು ದಾನ, ಶಿವ ಸಹಸ್ರನಾಮ, ಹನುಮಂತನ ಸೇವೆ, ಗ್ರಾಮದೇವತೆಗೆ ಪೂಜೆ, ಸೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net