

ಬೆಂಗಳೂರು: ಚಲಿಸುತ್ತಿದ್ದ ಸಾರಿಗೆ ಬಸ್ನಿಂದ ಶಾಲಾ ಬಾಲಕಿಯೊಬ್ಬಳು ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಜೂ.12ರಂದು ಹಾವೇರಿಯ ಹಾನಗಲ್ಲ ತಾಲೂಕಿನಲ್ಲಿ ನಡೆದಿತ್ತು. 8ನೇ ತರಗತಿ ವಿದ್ಯಾರ್ಥಿನಿ ಮಧು ಕರಬಸಪ್ಪ ಚಕ್ರಸಾಲಿ(14) ಮೃತೆ. ಹೆಚ್ಚಿನ ಸಂಖ್ಯೆಯ ಪ್ರಾಯಣಿಕರನ್ನು ಬಸ್ನಲ್ಲಿ ತುಂಬಿದ್ದು ಘಟನೆಗೆ ಕಾರಣವಾಗಿತ್ತು.
ಈ ಪ್ರಕರಣವನ್ನು ಉಲ್ಲೇಖಿಸಿ ರಾಜ್ಯ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿತ್ತು. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ 'ಶಕ್ತಿ ಯೋಜನೆ' ಜಾರಿ ಮಾಡಿದ ಪರಿಣಾಮ ಈ ದುರಂತ ಸಂಭವಿಸಿದೆ. ಇದಕ್ಕೆ ಯಾರು ಹೊಣೆ? ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಉತ್ತರಿಸಬೇಕು ಎಂದು ಬಿಜೆಪಿ ಟ್ವೀಟ್ ಮಾಡಿ ಪ್ರಶ್ನಿಸಿತ್ತು.
ಇದೀಗ ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ರಾಜ್ಯ ಬಿಜೆಪಿಯನ್ನು ವ್ಯಂಗ್ಯವಾಡಿದೆ. ಬಿಜೆಪಿ ಪಕ್ಷದ ನೋವು ನಮಗೆ ಅರ್ಥವಾಗುತ್ತದೆ. ಬಿಜೆಪಿಯ ಉರಿ ಶಮನಕ್ಕಾಗಿ 'ಬರ್ನಲ್ ಭಾಗ್ಯ' ಕೊಡುವ ಬಗ್ಗೆ ಚಿಂತಿಸುತ್ತೇವೆ ಎಂದು ಹೇಳಿದೆ. ಪೂರ್ವಸಿದ್ಧತೆ ಇಲ್ಲದೆ ಲಾಕ್ ಡೌನ್ ಮಾಡಿ, ನೋಟು ನಿಷೇಧ ಮಾಡಿ ಮೃತಪಟ್ಟ ನೂರಾರು ಮಂದಿಯ ಬಗ್ಗೆ ಇದೇ ಕಾಳಜಿ ಇರಲಿಲ್ಲವೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚುವರಿ ಬಸ್ಗಳನ್ನು ಖರೀದಿಸಲು ಚಿಂತಿಸುತ್ತಿದ್ದೇವೆ. ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಸಿದ ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಉತ್ತರಿಸುವ ಮೂಲಕ ಕಾಂಗ್ರೆಸ್ ಟಕ್ಕರ್ ನೀಡಿದೆ.