

ಬೆಂಗಳೂರು: ಮನೆಯ ಪಕ್ಕದ ಖಾಲಿ ಜಾಗದಲ್ಲಿ ಕಸವನ್ನು ಇಟ್ಟಿದ್ದಕ್ಕೆ ಪಕ್ಕದ ಮನೆಯವರು ಹಲ್ಲೆ ಮಾಡಿದ್ದಾರೆ ಎಂದು ಕಿರುತೆರೆ ನಟರೊಬ್ಬರು ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.
ಪಕ್ಕದ ಮನೆಯ ನಿವಾಸಿಯಾಗಿರುವ ವ್ಯಕ್ತಿಯೊಬ್ಬರು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ನಟ ಚರಿತ್ ಬಾಲಪ್ಪ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಅನ್ನಪೂರ್ಣೇಶ್ವರಿ ನಗರದ ಡಿ ಗ್ರೂಪ್ ಲೇಔಟಿನಲ್ಲಿ ವಾಸವಿರುವ ಚರಿತ್, ಫೆಬ್ರವರಿ ೨೩ರಂದು ಶೂಟಿಂಗ್ ನಿಮಿತ್ತ ಹೈದರಾಬಾದ್ ತೆರಳುವ ತರಾತುರಿಯಲ್ಲಿ ತಮ್ಮ ಮನೆಯ ಕಸವನ್ನು ಮನೆ ಪಕ್ಕದ ಖಾಲಿ ಜಾಗದಲ್ಲಿ ಇಟ್ಟಿದ್ದರು. ಆಗ ಅದೇ ಏರಿಯಾದ ವ್ಯಕ್ತಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು.ಈ ವೇಳೆ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಆ ವ್ಯಕ್ತಿ ತಮ್ಮನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿ, ತಮ್ಮ ಎಡಗೈ ಕಿರುಬೆರಳಿಗೆ ಗಾಯ ಮಾಡಿ, ಬ್ಯಾಗಿಗೆ ಹಾನಿ ಮಾಡಿದ್ದಾರೆ. ಶೂಟಿಂಗ್ ನಿಮಿತ್ತ ಹೈದರಾಬಾದ್‌ಗೆ ತೆರಳಿದ್ದರಿಂದ ತಡವಾಗಿ ಬಂದು ದೂರು ನೀಡುತ್ತಿರುವುದಾಗಿ ನಟ ಚರಿತ್ ಬಾಲಪ್ಪ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.