ಅರಿವಿನಿಂದ ದುಃಖವನ್ನು ಆತ್ಮದೆಡೆಗೆ ತಿರುಗಿಸಿ ಸಂತೋಷ ಅನುಭವಿಸಿ

Enlightenment
Published on
ಶ್ರೀ ಸ್ಫೂರ್ತಿ
ನಿಮ್ಮ ಮನಸ್ಸು ದೂಷಿಸದಿದ್ದಾಗ, ಧೈರ್ಯದಿಂದಿದ್ದು ಜವಾಬ್ದಾರಿಯನ್ನು ತೆಗೆದುಕೊಂಡಾಗ, ವಿಶ್ವಾಸದಿಂದಿದ್ದು ಖಾಲಿ ಮತ್ತು ಟೊಳ್ಳಾದಾಗ ನೀವು ಅತೀ ಸುಂದರ, ಅವರ್ಣನೀಯ ವ್ಯಕ್ತಿ. ಸರಿಪಡಿಸಲು ಅಸಮರ್ಥರಾದವರಿಗೆ, ಕಾರ್ಯವನ್ನು ಮಾಡಲು ಸಿದ್ಧರಾಗಿಲ್ಲದವರಿಗೆ ದೂರುವ ಹಕ್ಕೂ ಇಲ್ಲ. ಸರಿಪಡಿಸಲು ಸಮರ್ಥರಾದವರು, ಕಾರ್ಯವನ್ನು ಮಾಡುವವರು ದೂರುವುದೇ ಇಲ್ಲ. ದೂರುವುದು ಬಲಹೀನತೆಯ ಲಕ್ಷಣ. ಆತ್ಮದ ಬಗ್ಗೆ ಅರಿತುಕೊಳ್ಳದಿರುವ ಪೂರ್ಣ ಅಜ್ಞಾನದ ಲಕ್ಷಣವೇ ದೂರು ಹೇಳುವಿಕೆಯೆಲ್ಲವೂ. ಇಂದ್ರಿಯಗಳು ಆತ್ಮದೊಡನಿದ್ದಾಗ ಅದೇ ಸುಖ. ಇಂದ್ರಿಯಗಳು ಆತ್ಮದಿಂದ ದೂರ ಹೋದಾಗ, ವಿಷಯ ವಸ್ತುಗಳಲ್ಲೇ, ಕೆಸರಿನಲ್ಲೇ ಕಳೆದು ಹೋದಾಗ ಅದೇ ದುಃಖ.

ದಿವ್ಯ ಮನಸ್ಸು ನರ್ತಿಸುತ್ತಿರುತ್ತದೆ: ದೂರುವುದರಿಂದ ನಿಮ್ಮೊಡನೆ ಜನಿಸಿರುವ ಸೌಂದರ್ಯವೆಲ್ಲವೂ ಕಳೆದು ಹೋಗುತ್ತದೆ. ಆಧ್ಯಾತ್ಮಿಕ ಪಥದಲ್ಲಿ ನಡೆಯುತ್ತಿರುವವರಲ್ಲಿ ಇದು ಮತ್ತಷ್ಟು ಎದ್ದು ಕಾಣುತ್ತದೆ. ಉದ್ದನೆಯ ಮುಖವನ್ನಿಟ್ಟುಕೊಂಡು, ಇತರರು ಬಂದು ತಮ್ಮನ್ನು ಸಮಾಧಾನ ಪಡಿಸಲಿ ಎಂದು ಅಪೇಕ್ಷಿಸುವವರನ್ನು ಕಂಡರೆ ಎಲ್ಲರೂ ದೂರ ಓಡಿ ಹೋಗುತ್ತಾರೆ. ನೀವು ಇಳಿಮುಖವಾದಂತೆ ನಿಮಗನಿಸುತ್ತಿದ್ದರೆ ನಿಮ್ಮನ್ನು ನೀವೇ ಸಮಾಧಾನಗೊಳಿಸಿಕೊಳ್ಳಿ, ನಿಮ್ಮನ್ನು ನೀವೇ ಮೆಚ್ಚಿಸಿಕೊಳ್ಳಿ. ಇತರರು ನಿಮ್ಮನ್ನು ಸಮಾಧಾನಗೊಳಿಸಬೇಕೆಂದು ಎದುರು ನೋಡುವುದು ಮಂದ ಬುದ್ಧಿಯ ಲಕ್ಷಣ. ಅದು ಅಜ್ಞಾನದ ಮೂಲ. ಎಲ್ಲರ ಗಮನವೂ ನಿಮ್ಮ ಮೇಲೇ ಇರಬೇಕೆಂದು ನೀವು ಬಯಸಿದರೆ ನಿಮಗೆ ಸಿಗುವುದೆಲ್ಲವೂ ಕೇವಲ ಒತ್ತಡ ಮಾತ್ರ. ದೂರುವ ಮನಸ್ಸು ಈ ಜಗತ್ತಿನಲ್ಲಿಯೇ ಮುಳುಗಿ ಹೋಗಿರುವಂತಹ ಮನಸ್ಸು. ದಿವ್ಯ ಮನಸ್ಸು ಸದಾ ನರ್ತಿಸುತ್ತಿರುತ್ತದೆ. ಪರಿಹಾರವನ್ನು ತೋರಿಸದೆ ಕೇವಲ ದೂರುವ ಮನಸ್ಸು ಬೇಜವಾಬ್ದಾರಿಯುತವಾದ ಮನಸ್ಸು. ಪರಿಹಾರಗಳು ಕೆಲಸ ಮಾಡದಿದ್ದಾಗ ಇತರ ಬೇರೆ ಪರಿಹಾರಗಳನ್ನು ಹುಡುಕುವುದೇ ಧೈರ್ಯ.

ಎಲ್ಲಾ ಒಳ್ಳೆಯದೇ: ಬಾಹ್ಯದ ಸೌಂದರ್ಯಕ್ಕಾಗಿ ಅಲಂಕಾರವನ್ನು ಮಾಡಿಕೊಳ್ಳಬೇಕು. ಆದರೆ ಒಂದು ವಿಷಯ ನೆನಪಿಡಿ, ನಿಜವಾದ ಸೌಂದರ್ಯಕ್ಕಾಗಿ ಎಲ್ಲವನ್ನೂ ಬಿಡಬೇಕು. ಬಾಹ್ಯದ ಸೌಂದರ್ಯಕ್ಕಾಗಿ ನೀವು ಮೇಕಪ್ ಮಾಡಿಕೊಳ್ಳಬೇಕು. ಆಂತರ್ಯದ, ನಿಜವಾದ ಸೌಂದರ್ಯಕ್ಕಾಗಿ, ನೀವು ಅದಾಗಲೇ ತಯಾರಾಗಿದ್ದೀರಿ, ಸಜ್ಜಾಗಿರುವಿರಿ ಎಂದು ಅರಿತುಕೊಳ್ಳುವುದಷ್ಟೇ ಸಾಕು.

ಯಾರಾದರೂ ನಿಮ್ಮನ್ನು ದೂಷಿಸಿದಾಗ ಸಾಮಾನ್ಯವಾಗಿ ಏನು ಮಾಡುತ್ತೀರಿ? ಅವರನ್ನು ಪುನಃ ದೂಷಿಸುತ್ತೀರಿ ಅಥವಾ ನಿಮ್ಮಲ್ಲಿ ನಿಗ್ರಹ ಭಾವವನ್ನು ಬೆಳೆಸಿಕೊಳ್ಳುತ್ತೀರಿ. ಯಾರಾದರೂ ನಿಮ್ಮನ್ನು ದೂಷಿಸಿದಾಗ, ನಿಮ್ಮ ಕೆಟ್ಟ ಕರ್ಮಗಳನ್ನು ನಿಮ್ಮಿಂದ ಅವರು ತೆಗೆದುಕೊಳ್ಳುತ್ತಿರುತ್ತಾರೆ. ಇದನ್ನು ಅರ್ಥ ಮಾಡಿಕೊಂಡಾಗ ಅದರ ಬಗ್ಗೆ ನಿರೋಧವನ್ನೂ ಉಂಟುಮಾಡಿಕೊಳ್ಳದೆ ಹರ್ಷಿಸುತ್ತೀರಿ. ‘ಓ ಒಳ್ಳೆಯದು. ಆ ವ್ಯಕ್ತಿ ನನ್ನನ್ನು ದೂಷಿಸುತ್ತಿದ್ದಾರೆ, ಎಲ್ಲಾ ಒಳ್ಳೆಯದೇ ಆಗುತ್ತದೆ. ನನ್ನಿಂದ ಏನೋ ಒಂದು ಹೊರಟು ಹೋಗುತ್ತದೆ’ ಎನ್ನುತ್ತೀರಿ. ನಿಮ್ಮ ನಿಗ್ರಹವನ್ನು ತ್ಯಜಿಸಿದಾಗ ನಿಮ್ಮ ಕರ್ಮಗಳೆಲ್ಲವೂ ಬಿಟ್ಟು ಹೋಗುತ್ತವೆ. ಯಾರಾದರೂ ನಿಮ್ಮನ್ನು ದೂಷಿಸಿದಾಗ ನಿಮಗೆ ನೋವಾಗಿ, ದುಃಖವಾಗುತ್ತದೆ. ಇದರ ಕಾರಣ ನೀವು ನಿರೋಧಿಸುತ್ತಿರುವುದರಿಂದ. ನೀವೇನೆಲ್ಲಾ ನಿರೋಧಿಸುತ್ತೀರೊ ಅದು ಹಾಗೆಯೇ ಉಳಿದುಕೊಳ್ಳುತ್ತದೆ. ಅಜ್ಞಾನಿಯಾದ ವ್ಯಕ್ತಿಯು, ನನಗೆ ನೋವಾಗುವುದರಿಂದ ನನ್ನನ್ನು ದೂಷಿಸಬೇಡಿ ಎನ್ನುತ್ತಾರೆ. ಜ್ಞಾನಿಗಳಾದವರೂ ಸಹ ಹಾಗೆಯೇ ಹೇಳಿದರೂ ಅದರಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ಜ್ಞಾನಿಗಳು, ನಿನಗೆ ನೋವಾಗುವುದರಿಂದ ನನ್ನನ್ನು ದೂಷಿಸಬೇಡ ಎನ್ನುತ್ತಾರೆ. ದೂಷಣೆಯನ್ನು ಪ್ರತಿಬಂಧಿಸುವುದರಿಂದ ನಿಮಗೆ ನೋವಾಗುತ್ತದೆ.

ಬಾಹ್ಯದಲ್ಲಿ ನೀವು ನಿಗ್ರಹವನ್ನು ಅಭಿವ್ಯಕ್ತಗೊಳಿಸದಿದ್ದರೂ ಸಹ, ನಿಮ್ಮ ಆಂತರ್ಯದಲ್ಲಿ ನಿರೋಧಿಸಿದಾಗ ನಿಮಗೆ ನೋವುಂಟಾಗುತ್ತದೆ. ದೂಷಣೆ ಹಾಗೂ ನಿರೋಧದ ಪ್ರಕ್ರಿಯೆಯನ್ನು ಗಮನಿಸಿದಾಗ ಈ ಸುಂದರ ತತ್ವದ ಅರಿವು ನಿಮ್ಮಲ್ಲಿ ಮೂಡುತ್ತದೆ.

ಯಾರೂ ಕಾರಣರಲ್ಲ: ಒಂದು ಪ್ರಾಚೀನ ಹೇಳಿಕೆಯು, ನಮ್ಮ ಸುಖಗಳಿಗೆ ಮತ್ತು ದುಃಖಗಳಿಗೆ ಯಾರೂ ಕಾರಣರಲ್ಲ ಎಂದು ಹೇಳುತ್ತದೆ. ದುಃಖವನ್ನು ಅನುಭವಿಸುತ್ತಿದ್ದರೆ ಅದಕ್ಕೆ ಒಂದಾನೊಂದು ರೀತಿಯಲ್ಲಿ ನೀವು ಕಾರಣರಾಗಿರುತ್ತೀರಿ. ನೀವು ಸಂತೋಷದಿಂದಿದ್ದರೆ, ನೀವು ಮಾಡಿರುವ ಪುಣ್ಯದಿಂದ ಸಂತೋಷದಿಂದಿದ್ದೀರಿ. ಇದನ್ನು ಅರಿತಾಗ ನಿಮ್ಮ ಸಂತೋಷಕ್ಕಾಗಿ ಅಥವಾ ದುಃಖಕ್ಕಾಗಿ ಇತರರನ್ನು ನೀವು ದೂಷಿಸುವುದಿಲ್ಲ. ನೀವು ಬಹಳ ಒಳ್ಳೆಯವರೆಂದು ನಿಮಗನಿಸಿದರೆ, ಆಗ ಜಗತ್ತನ್ನು ದೂಷಿಸುತ್ತೀರಿ ಮತ್ತು ದುಃಖಿಗಳಾಗುತ್ತೀರಿ. ಜ್ಞಾನದಿಂದ, ಅರಿವಿನಿಂದ ದುಃಖವನ್ನು ಆತ್ಮದೆಡೆಗೆ ತಿರುಗಿಸಿ ಸಂತೋಷವಾಗಿ ಮಾರ್ಪಡಿಸಬಹುದು. ಜ್ಞಾನದ ಅಭಾವದಿಂದ ಅದೇ ದುಃಖವು ಗುಣಾಕಾರವಾಗುತ್ತಲೇ ಇರುತ್ತದೆ, ಎಂದಿಗೂ ಪೂರ್ಣವಾಗುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net