ತುಂಗಭದ್ರಾ ನದಿಗೆ ಹರಿದ ವಿಷಪೂರಿತ ನೀರು; ಮೀನು ಸೇರಿ ಜಲಚರಗಳ ಮಾರಣಹೋಮ

3-RNR-03
Published on

ರಾಣೆಬೆನ್ನೂರ: ಕಾರ್ಖಾನೆಗಳಿಂದ ತುಂಗಭದ್ರಾ ನದಿಗೆ ಹರಿಸಿದ ವಿಷಪೂರಿತ ನೀರಿನಿಂದಾಗಿ ಸಾವಿರಾರು ಮೀನುಗಳು ಸೇರಿ ಇತರ ಜಲಚರಗಳ ಮಾರಣಹೋಮವಾದ ಘಟನೆ ತಾಲೂಕಿನ ನಲವಾಗಿಲ ಗ್ರಾಮ ಸೇರಿ ಇತರ ಭಾಗದಲ್ಲಿ ಭಾನುವಾರ ಸಂಭವಿಸಿದೆ.
ತಾಲೂಕಿನ ಕುಮಾರಪಟ್ಟಣ ಬಳಿಯಿರುವ ಕಾರ್ಖಾನೆಗಳಿಂದ ಶನಿವಾರ ರಾತ್ರಿ ವಿಷಪೂರಿತ ನೀರನ್ನು ನದಿಗೆ ಹರಿಸಲಾಗಿದೆ. ಇದರಿಂದಾಗಿ ನದಿಯಲ್ಲಿದ್ದ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದ್ದು, ಮೀನುಗಳು ಮೃತಪಟ್ಟಿವೆ. ತಾಲೂಕಿನ ನಲವಾಗಲ, ಕೋಣನತಂಬಗಿ, ಸೋಮಲಾಪುರ, ಉದಗಟ್ಟಿ ಗ್ರಾಮ ಸೇರಿ ನದಿಪಾತ್ರದ ಅನೇಕ ಗ್ರಾಮಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.
ಕಾರ್ಖಾನೆಯವರು ತುಂಗಭದ್ರಾ ನದಿಗೆ ತ್ಯಾಜ್ಯಯುಕ್ತ ರಾಸಾಯನಿಕ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಅದನ್ನು ಸೇವಿಸಿದ ಜಲಚರಗಳು ಸಾವನ್ನಪ್ಪಿವೆ. ಸತ್ತ ಮೀನುಗಳನ್ನು ತಿಂದ ಪಕ್ಷಿಗಳು ಕೂಡ ಸಾವನ್ನಪ್ಪಿವೆ ಹಾಗೂ ನದಿ ನೀರಿನ ಬಣ್ಣ ಕೂಡ ಕಪ್ಪಾಗಿದ್ದು. ನದಿಯ ಸುತ್ತಲೂ ದುರ್ವಾಸನೆ ಬೀರುತ್ತಿದ್ದು. ಇದಕ್ಕೆ ನದಿ ಪಾತ್ರದ ಸುತ್ತಮುತ್ತಲಿನ ಕಾರ್ಖಾನೆಗಳು ನದಿಗೆ ಹರಿಬಿಟ್ಟ ಕಲುಷಿತ ನೀರು ಕಾರಣವಾಗಿದೆ ಎಂದು ನದಿಪಾತ್ರದ ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನೂ ಕೆಲವು ಜನರು ಇದನ್ನ ಅರಿಯದೆ ಮೀನುಗಳು ಮನೆಗೆ ತೆಗೆದುಕೊಂಡು ಹೋಗುತ್ತಿದ್ದವರನ್ನು ಸ್ಥಳೀಯರು ಅವರಿಗೆ ತಿಳಿ ಹೇಳಿ ಅವುಗಳನ್ನು ಚೆಲ್ಲಿಸಿದ್ದಾರೆ. ಆದರೆ, ಈಗಾಗಲೇ ಬಹಳಷ್ಟು ಜನರು ಮೀನುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಯಾರಿಗಾದರೂ ತೊಂದರೆಯಾದರೆ ಯಾರು ಹೊಣೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ಸಮಸ್ಯೆ ಹೊಸದೇನಲ್ಲ ಪ್ರತಿ ವರ್ಷ ಕಾರ್ಖಾನೆಗಳಿಂದ ಬಿಟ್ಟ ಕಲುಷಿತ ನೀರಿನಿಂದಾಗಿ ಜಲಚರಗಳು ಸಾವು ನಿರಂತರವಾಗಿ ಸಂಭವಿಸುತ್ತಲೆ ಇದೆ. ಆದರೆ ಕಾರ್ಖಾನೆಗಳು ಮಾಡುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಜಾಣ ಕುರುಡು ನೀತಿ ಅನುಸರಿಸುತ್ತಿವೆ.
ಇತ್ತೀಚಿಗೆ ಪರಿಸರ ಇಲಾಖೆ ಅಧಿಕಾರಿಗಳು ಈ ನದಿಯ ನೀರು ಕುಡಿಯಲು ಯೋಗ್ಯವಲ್ಲವೆಂದು ವರದಿ ನೀಡಿದೆ ಎನ್ನಲಾಗಿದೆ. ಆದರೂ ಈವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಆದ್ದರಿಂದ ತಾಲೂಕಿನ ತಹಸೀಲ್ದಾರ್‌ರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮವಾಗಿ ಕಲುಷಿತ ನೀರನ್ನು ನದಿಗೆ ಬಿಡುವ ಕಾರ್ಖಾನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net