

ರಾಣೆಬೆನ್ನೂರ: ತಾಲೂಕಿನ ಕೊಡಿಯಾಲ-ಹೊಸಪೇಟೆ ಸಮೀಪದ ತುಂಗಭದ್ರಾ ನದಿಗೆ ತಡೆಗೋಡೆ ನಿರ್ಮಾಣ ಮತ್ತು ಸಾರ್ವಜನಿಕರ ಓಡಾಟಕ್ಕೆ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ತಹಸೀಲ್ದಾರ್ ಸುರೇಶಕುಮಾರ ಟಿ. ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕಿನ ಕೊಡಿಯಾಲ-ಹೊಸಪೇಟೆ ಮತ್ತು ಹರಿಹರ ಮಧ್ಯದಲ್ಲಿರುವ ಸೇತುವೆ ಬಳಿ ದುರ್ಗಾದೇವಿ ದೇವಸ್ಥಾನ ಹಾಗೂ ನಾಗವನವಿದೆ. ಇಲ್ಲಿಗೆ ನಿತ್ಯವೂ ಜನತೆ ಹೋಗಿ ಬರುತ್ತಾರೆ. ಆದರೆ, ನದಿಪಾತ್ರದಲ್ಲಿ ನೀರು ಹೆಚ್ಚಾದರೆ ಈ ಭಾಗಕ್ಕೆ ಹೋಗಲು ತೊಂದರೆ ಉಂಟಾಗುತ್ತಿದೆ.
ಪ್ರವಾಹ ಉಂಟಾದ ಸಮಯದಲ್ಲಿ ಈ ಭಾಗದಲ್ಲಿ ಜನರ ಜೀವಹಾನಿ ಸಂಭವಿಸುವ ಸಾಧ್ಯತೆಗಳಿವೆ. ಆದ್ದರಿಂದ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ನದಿಗೆ ತಡೆಗೋಡೆ ನಿರ್ಮಿಸಬೇಕು. ಜತೆಗೆ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಗ್ರಾಮಸ್ಥರಾದ ನಾರಾಯಣಪ್ಪ ಲಮಾಣಿ, ಹಾಲೇಶ ಬುಳ್ಳಾಪುರ, ಪ್ರಶಾಂತ ಬಾರ್ಕಿ, ಸತೀಶ ಬೆಳವಿಗಿಮಠ ಮತ್ತಿತರರು ಉಪಸ್ಥಿತರಿದ್ದರು.