ತುಂಗಾ ನದಿ ಸ್ವಚ್ಛತೆ, ಸಿಎಂಗೆ ನಟ ಅನಿರುದ್ಧ ಮನವಿ

actor aniruddha memorendam to cm
ಶಿವಮೊಗ್ಗ ತುಂಗಾ ನದಿಯಲ್ಲಿ ಸ್ವಚ್ಛತೆ ಕಾಪಾಡಲು ಸೂಕ್ತ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಟ, ಸಾಮಾಜಿಕ ಕಾರ್ಯಕರ್ತ ಅನಿರುದ್ಧ ಜಕತರ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ಶಿವಮೊಗ್ಗ ತುಂಗಾ ನದಿಯಲ್ಲಿ ಸ್ವಚ್ಛತೆ ಕಾಪಾಡಲು ಸೂಕ್ತ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಟ, ಸಾಮಾಜಿಕ ಕಾರ್ಯಕರ್ತ ಅನಿರುದ್ಧ ಜಕತರ ಒತ್ತಾಯಿಸಿದರು.

ಬೆಂಗಳೂರಿನ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಬುಧವಾರ ಸಿಎಂ ಭೇಟಿ ಮಾಡಿದ ಅವರು, ಶಿವಮೊಗ್ಗದಲ್ಲಿ ಆರಂಭವಾಗಿ ಹರಿಹರ, ಹೊಸಪೇಟೆಯ ಮಾರ್ಗವಾಗಿ ಮಂತ್ರಾಲಯ ತಲುಪಿ ಮುಂದೆ ಕೃಷ್ಣಾ ನದಿ ಸೇರುವ ತುಂಗೆಯು ಕುಲಷಿತಗೊಂಡಿದೆ. ಅಶುದ್ಧತೆಯಿಂದ ಬಳಸಲು ಯೋಗ್ಯವಲ್ಲದಂತಹ ದಯನೀಯ ಸ್ಥಿತಿಗೆ ತಲುಪಿದೆ ಎಂದು ವಿಡಿಯೋ ಸಹಿತ ಅವ್ಯಸ್ಥೆಯನ್ನು ಗಮನಕ್ಕೆ ತಂದರು.
ತುಂಗಭದ್ರೆಯು ಬಳಕೆಗೆ ಯೋಗ್ಯವಲ್ಲದಂತಹ ಶೋಚನೀಯ ಸ್ಥಿತಿ ತಲುಪಿರುವುದನ್ನು ಕಂಡು ನಿಜಕ್ಕೂ ದಿಗ್ಭ್ರಮೆಯಾಗುತ್ತಿದೆ. ಮನಸ್ಸಿಗೆ ನೋವಾಗುತ್ತಿದೆ. ಶಿವಮೊಗ್ಗ ನಗರದ ಕಾಲುವೆ ಮೂಲಕ ಕೊಳಚೆ ನೀರು ಅವ್ಯಾಹತವಾಗಿ ನದಿಗೆ ಹರಿದುಬರುತ್ತಿದ್ದು, ಇಡೀ ವಾತಾವರಣವೇ ಮಲೀನವಾಗಿದೆ. ದುರ್ವಾಸನೆ ಆವರಿಸಿದೆ. ಇಲ್ಲಿ ಸಂಸ್ಕರಿಸದ ಕೊಳಚೆ ನೀರು ವಿಶೇಷವಾಗಿ ಅಮೋನಿಯಾ ಮತ್ತು ಫಾಸ್ಪೇಟ್ ಪೋಷಕಾಂಶಗಳ ಪ್ರಬಲ ಮೂಲವಾಗಿದೆ. ಸುಲಭವಾಗಿ ಕಳೆ ಬೆಳೆಯಲು ಇದು ಏಕೈಕ ಕಾರಣವಾಗಿದ್ದು ಕಳೆಯಿಂದ ನದಿಯಲ್ಲಿನ ಆಮ್ಲಜನಕದ ಮಟ್ಟವು ಶೂನ್ಯವಾಗುತ್ತದೆ. ಜಲಚರಗಳು ಜೀವಿಸುವುದಕ್ಕೂ ಯಾವುದೇ ಸಾಧ್ಯವಿಲ್ಲ. ಇದು ಖಂಡಿತವಾಗಿಯೂ ನದಿಯ ವಿಷಾದನೀಯ ಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದರು.
ಮನವಿಗೆ ತಕ್ಷಣವೇ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಅವರು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕೂಡಲೇ ತುಂಗಾ ನದಿ ಸ್ವಚ್ಛತೆಗೆ ಗಮನ ಹರಿಸುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net