

Tuna Fish: ಟೋಕಿಯೋದ ಟುನಾ ಮೀನಿಗೆ ಹರಾಜಿನಲ್ಲಿ ಭಾರೀ ಬೇಡಿಕೆ ಹೆಚ್ಚಿದ್ದು, ಕೋಟಿ ರೂಪಾಯಿಗೆ ಖರೀದಿಯಾದ ಸಂಗತಿ ಸದ್ಯ ಹಲವರನ್ನು ನಿಬ್ಬೆರಗಾಗಿಸಿದೆ. ಭಾನುವಾರ (ಜ.05) ನಡೆದ ಹರಾಜು ಪ್ರಕ್ರಿಯೆಯಲ್ಲಿ ಬೈಕ್ ತೂಕವಿರುವ ಈ ಮೀನು ಬರೋಬ್ಬರಿ 1.3 ಮಿಲಿಯನ್ ಯೆನ್ ಅಂದರೆ 11 ಕೋಟಿ ರೂ.ಗೆ ಮಾರಾಟವಾಗಿದೆ. ಇದು ವಾರ್ಷಿಕ ಪ್ರತಿಷ್ಠಿತ ಹೊಸ ವರ್ಷದ ಆಕ್ಷನ್ನಲ್ಲಿ ಪಾವತಿಸಿದ ಎರಡನೇ ದುಬಾರಿ ಖರೀದಿ ಎಂದು ವರದಿಯಾಗಿದೆ.
608 ಪೌಂಡ್ ಅಂದರೆ 276 ಕೆಜಿ ತೂಕವಿರುವ ಟ್ಯೂನಾ ಮೀನನ್ನು ಮೈಕೆಲಿನ್-ನಕ್ಷತ್ರದ ಸುಶಿ ರೆಸ್ಟೋರೆಂಟ್ ಮಾಲೀಕತ್ವದ ಒನೊಡೆರಾ ಗ್ರೂಪ್ ಹರಾಜಿನಲ್ಲಿ ಸಖತ್ ಪೈಪೋಟಿ ನಡೆಸಿ ಖರೀದಿಸಿದೆ. ಬ್ಲೂಫಿನ್ ಟ್ಯೂನಾ ಫಿಶ್ ಬರೋಬ್ಬರಿ ಒಂದು ಬೈಕ್ ತೂಕವನ್ನು ಹೊಂದಿದ್ದು, ತನ್ನ ಗಾತ್ರ ಮತ್ತು ಮಾಂಸದಿಂದಲೇ ಬಹಳ ಬೇಡಿಕೆ ಪಡೆದುಕೊಂಡಿದೆ. 1999ರಲ್ಲಿ ಪ್ರಕಟಿಸಲಾದ ಡೇಟಾವನ್ನು ಪರಿಶೀಲಿಸಿ ನೋಡಿದರೆ ಟೋಕಿಯೊದ ಅತೀ ದೊಡ್ಡ ಹಾಗೂ ಮುಖ್ಯ ಮೀನು ಮಾರುಕಟ್ಟೆಯಲ್ಲಿ ವರ್ಷದ ಆರಂಭಿಕ ಹರಾಜಿನಲ್ಲಿ ಪಾವತಿಸಲಾದ ಎರಡನೇ ದುಬಾರಿ ಮೌಲ್ಯದ ಮೀನು ಇದಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಬ್ಲ್ಯೂ ಟ್ಯೂನಾ ಮೀನನ್ನು ಖರೀದಿಸಿದ ಮಾಲೀಕರು ಮಾತನಾಡಿ, "ವರ್ಷದ ಆರಂಭದಲ್ಲಿಯೇ ಟ್ಯಾನಾ ಫಿಶ್ನ ಕೊಂಡುಕೊಂಡಿದ್ದೇವೆ. ಇದು ನಮಗೆ ಅದೃಷ್ಟ ಹೊತ್ತು ತರುವ ಸಂಕೇತವಾಗಿದೆ. ಜನರು ಇದನ್ನು ತಿನ್ನಲಿ ಮತ್ತು ಅದ್ಭುತ ವರ್ಷವನ್ನು ನೋಡಲಿ ಎಂದು ನಾವು ಆಶಿಸುತ್ತೇವೆ" ಎಂದರು. 2019ರಲ್ಲಿ 278 ಕೆಜಿ ತೂಕ ಹೊಂದಿದ್ದ ಬ್ಲೂಫಿನ್ ಟ್ಯೂನಾ 333.6 ಮಿಲಿಯನ್ ಯೆನ್ಗೆ ಹರಾಜಿನಲ್ಲಿ ಖರೀದಿಯಾಗಿತ್ತು. ಈ ಮೂಲಕ ಆಕ್ಷನ್ನಲ್ಲಿ ಹೊಸ ದಾಖಲೆಯನ್ನು ಬರೆಯಿತು. 11 ಕೋಟಿ ರೂ.ಗೆ ಖರೀದಿಯಾದ ಟ್ಯೂನಾ ಫಿಶ್ ಸದ್ಯ ಇದರ ನಂತರದ ಸ್ಥಾನದಲ್ಲಿದೆ,(ಏಜೆನ್ಸೀಸ್).