

ಬೆಂಗಳೂರು: ಗಣೇಶೋತ್ಸವದಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ಸುತ್ತೋಲೆ ಹೊರಡಿಸಿ ವ್ಯಕ್ತಿ, ಸಮಾಜದ ಹಕ್ಕಿಗೆ ಧಕ್ಕೆ ತಂದ ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಮತ್ತು ಈ ಕುರಿತು ಕುಲಸಚಿವರಿಗೆ ಪತ್ರ ಬರೆದ ಇನ್‍ಸ್ಪೆಕ್ಟರ್ ನ್ನು ವಜಾ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಡಾ. ಸಿ.ಎನ್.ಅಶ್ವತ್ಥÀನಾರಾಯಣ ಆಗ್ರಹಿಸಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಭಾನುವಾರ ಮಾತನಾಡಿದ ಅವರು, ಇವರಿಬ್ಬರನ್ನೂ ಸೇವೆಯಿಂದ ವಜಾ ಮಾಡಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಎಚ್ಚರಿಸಿದರು. ಯುನಿವರ್ಸಿಟಿ ಇವರ ಕೈಗೊಂಬೆಯಾಗಿದೆ ಎಂದು ವಾಗ್ದಾಳಿ ಮಾಡಿದರು.
ಕಾನೂನಿನ ಮನವರಿಕೆ, ತಿಳುವಳಿಕೆ ಮಾಡಲಾಗದ ಇವರು ಇಂಥ ಜವಾಬ್ದಾರಿಯುತ ಸ್ಥಾನದಲ್ಲಿ ಮುಂದುವರೆಯಲು ಯೋಗ್ಯರಲ್ಲ. ಇಡೀ ಸಮಾಜದ ಭಾವನೆಗೆ ಇವರು ಧಕ್ಕೆ ತಂದಿದ್ದಾರೆ. ಸರಕಾರಕ್ಕೆ ನೈತಿಕತೆ ಇದ್ದಲ್ಲಿ ತಕ್ಷಣ ಈ ವ್ಯಕ್ತಿಗಳನ್ನು ವಜಾ ಮಾಡಬೇಕು. ಹಿಂದು ಸಮಾಜ, ದೇಶದ ಜನರ ಭಾವನೆಗೆ ಧಕ್ಕೆ ತಂದಿರುವುದನ್ನು ಖಂಡಿಸುವೆ ಎಂದರು.
ಸಾರ್ವಜನಿಕವಾಗಿ ವಿನಾಯಕ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ವಿನಾಯಕನ ಚತುರ್ಥಿ ಮೂಲಕ ಸಮಾಜವನ್ನು ಸಂಘಟನೆ ಮಾಡಿದ್ದು, ಸ್ವಾತಂತ್ರ್ಯ ಚಳವಳಿಗೂ ಅದು ಸ್ಫೂರ್ತಿ ಕೊಟ್ಟಿದೆ. ಸ್ವಾತಂತ್ರ್ಯ ಪೂರ್ವ ಕಾಲದಿಂದ ಇದು ಮುಂದುವರೆಯುತ್ತಿದೆ ಎಂದು ಹೇಳಿದರು.
ಇಂಥ ಸಂಸ್ಕೃತಿ, ಹಿನ್ನೆಲೆ, ಇತಿಹಾಸ ಉಳ್ಳ ವಿನಾಯಕ ಚತುರ್ಥಿಯ ಆಚರಣೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಗೃಹ ಇಲಾಖೆಯು ವಿನಾಯಕ ಚತುರ್ಥಿ ಕಾರ್ಯಕ್ರಮವೇ ಇಲ್ಲದಂತೆ ನೋಡಿಕೊಳ್ಳುತ್ತಿದೆ. ಪ್ರತಿಭಟನೆಯಲ್ಲಿ ಗಣೇಶನ ಮೂರ್ತಿ ಇಟ್ಟುಕೊಂಡರೆ ಅದನ್ನು ಪೊಲೀಸ್ ಜೀಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಆಕ್ಷೇಪಿಸಿದರು.
ಕಾನೂನುಬಾಹಿರ ಶಕ್ತಿಗಳು ಮೆರವಣಿಗೆಯಲ್ಲಿ ಬರುವುದಾದರೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಅಂತಹವರನ್ನು ಗುರುತಿಸಿ ಬಂಧಿಸಬೇಕಿತ್ತು. ಅದರ ಬದಲು ಪತ್ರ ಬರೆದಿರುವುದು, ಪೂರಕವಾಗಿ ವಿವಿ ಸಚಿವ ಸುತ್ತೋಲೆ ಹೊರಡಿಸಿರುವುದು ಸರಿಯಲ್ಲ. ತುಷ್ಟೀಕರಣಕ್ಕಾಗಿ ರಾಜ್ಯ ಸರ್ಕಾರ ಅಂಥವರನ್ನು ಅರೆಸ್ಟ್ ಮಾಡುವುದಿಲ್ಲ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಕಿಡಿ ಕಾರಿದರು.
ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತಕುಮಾರ್, ರಾಜ್ಯ ವಕ್ತಾರ ಮೋಹನ್ ವಿಶ್ವ, ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.