ಮಹಿಳಾ ಪೊಲೀಸ್ ಅಧಿಕಾರಿ ಮುಂದೆ ಹೀರೋಯಿಸಂ ತೋರಲು ಹೋಗಿ ಜೈಲು ಪಾಲಾದ ಕಾಂಗ್ರೆಸ್ ಮುಖಂಡ!

Shashi Hulikunte
Published on

ತುಮಕೂರು: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಮುಂದೆ ಹೀರೋಯಿಸಂ ತೋರಿಸಲು ಹೋದ ಕಾಂಗ್ರೆಸ್ ಮುಖಂಡ ಇದೀಗ ಜೈಲು ಪಾಲಾಗಿದ್ದಾರೆ.

ತುಮಕೂರು ನಗರದ ತಿಲಕ್ ಪಾರ್ಕ್ ಠಾಣೆಯ ಮಹಿಳಾ ಪಿಎಸ್​ಐ ರತ್ನಮ್ಮ ಜೊತೆ ಅಸಭ್ಯ ವರ್ತಿಸಿದ್ದಲ್ಲದೆ, ಅವಾಚ್ಯ ಪದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿಯಲ್ಲಿ ತುಮಕೂರಿನ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿ ಹುಲಿಕುಂಟೆಯನ್ನು ಬಂಧಿಸಲಾಗಿದೆ.

ಶಶಿ ಹುಲಿಕುಂಟೆ ಅವರು ಎರಡು ದಿನಗಳ ಹಿಂದೆ ತುಮಕೂರು ನಗರದ ಪ್ರಮುಖ ರಸ್ತೆಗಳ ಕಾಪೌಂಡ್ ಗೋಡೆಗಳ ಮೇಲೆ ಶಾಸಕ ಜ್ಯೋತಿ ಗಣೇಶ್ ಭಾವಚಿತ್ರವಿರುವ ಪೇ ಎಂಎಲ್ಎ ಪೋಸ್ಟರ್ ಅಂಟಿಸಿದ್ದರು. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ತಿಲಕ್​ ಪಾರ್ಕ್​ ಪೊಲೀಸರು ವಶಕ್ಕೆ ಪಡೆದಿದ್ದರು.

ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಶಶಿ ಹುಲಿಕುಂಟೆ ಒತ್ತಡ ಹಾಕಿದ್ದರು. ಬಿಡುಗಡೆ ಮಾಡಲು ಒಪ್ಪದಿದ್ದಾಗ ಪೊಲೀಸರ ಜೊತೆ ದರ್ಪದಿಂದ ಮಾತನಾಡಿ, ಅಸಭ್ಯವಾಗಿ ವರ್ತಿಸಿದ್ದರು. ಇನ್ನೂ 3 ತಿಂಗಳ ನಂತರ ನಮ್ಮ ಸರ್ಕಾರ ಬರುತ್ತದೆ. ಆಗ ನಿಮ್ಮನ್ನೆಲ್ಲ ನೋಡಿಕೊಳ್ಳುತ್ತೇನೆ ಎಂದು‌ ಪಿಎಸ್​ಐ ರತ್ನಮ್ಮ ಹಾಗೂ ಪೇದೆಗಳಿಗೆ ಆವಾಜ್ ಹಾಕಿದ್ದರು.

ಇಷ್ಟೇ ಅಲ್ಲದೆ, ಪೇ ಎಂಎಲ್ಎ ಪೋಸ್ಟರ್ ಪ್ರಕರಣದಲ್ಲಿ ಪೊಲೀಸರ ವಶವಾಗಿದ್ದ ನಾಲ್ವರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಠಾಣೆಯಿಂದಲೇ ಶಶಿ ಹುಲಿಕುಂಟೆ ಎಸ್ಕೇಪ್ ಮಾಡಿಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ತಿಲಕ್​ ಪಾರ್ಕ್​ ಠಾಣಾ ಪೊಲೀಸರು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆ ಹಾಗು ನಾಲ್ವರು ಯುವಕರನ್ನ ಬಂಧಿಸಿದ್ದಾರೆ.

ಆರೋಪಿ ಶಶಿ ಹುಲಿಕುಂಟೆ ತುಮಕೂರು ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ‌ ಆಗಿದ್ದಾನೆ. ಸದ್ಯ ಆರೋಪಿಗಳನ್ನ ತುಮಕೂರು 3 ನೇ ಹೆಚ್ಚುವರಿ ಜೆಎಮ್ಎಫ್​ಸಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net