ತುಮಕೂರು: ಅರಣ್ಯ ಇಲಾಖೆ ಹಾಗೂ ತುಮಕೂರು ವಿವಿ ಕಲಾ ಕಾಲೇಜು ಕಲ್ಪತರು ರೋವರ್ಸ್ ಮತ್ತು ರೇಂಜರ್ಸ್, ರಾಷ್ಟ್ರೀಯ ಸೇವಾ ಯೋಜನೆ ಮತ್ತು ರಾಷ್ಟ್ರೀಯ ಯುವ ರೆಡ್ಕ್ರಾಸ್ ಘಟಕ ಇವರ ಸಹಯೋಗದಲ್ಲಿ "ವಿಶ್ವ ಭೂದಿನ'ದ ಅಂಗವಾಗಿ ಸೋಮವಾರ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
"ನನ್ನ ಸಸಿ, ನನ್ನ ಶಕ್ತಿ' ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಆವರಣದಲ್ಲಿ ಆರಂಭವಾದ ಜಾಥಾಗೆ ಪ್ರಾಂಶುಪಾಲ ಪ್ರೊ. ಬಿ.ಕರಿಯಣ್ಣ ಉದ್ಘಾಟಿಸಿದರು.
ಕಾಲೇಜು ಆವರಣದಿಂದ ಹೊರಟ ಜಾಥಾ ಶ್ರೀಶಿವಕುಮಾರ ಮಹಾಸ್ವಾಮೀಜಿ ವೃತ್ತದ ಮೂಲಕ ಬೆಳಗುಂಬ ಮಾರ್ಗವಾಗಿ ದೇವರಾಯನದುರ್ಗದ ರಕ್ಷಿತಾರಣ್ಯ ವ್ಯಾಪ್ತಿಗೆ ಸೇರುವ ನಾಮದ ಚಿಲುಮೆಯವರೆಗೆ ಸಾಗಿತು. ಪರಿಸರ ಸಂರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಮತ್ತು ಸ್ಪಚ್ಛತೆ ಕಾರ್ಯ ಕೈಗೊಂಡರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿಸರ್ಗ ಸಂಸ್ಥೆ ಸಲಹೆಗಾರರಾದ ಟಿ.ವಿ.ಎನ್.ಮೂರ್ತಿ ದೇವರಾಯನದುರ್ಗದ ರಕ್ಷಿತ ಅರಣ್ಯವಲಯದ ಬಗ್ಗೆ ಮತ್ತು ಅದರ ಸಂರಕ್ಷಣೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ತುಮಕೂರು ಅರಣ್ಯ ವಲಯ ಅಧಿಕಾರಿ ಅನಿಲ್ ತುಮಕೂರಿನ ಸುತ್ತ ಮುತ್ತ ಇರುವ ಕಾಡು ಹಾಗೂ ವನ್ಯಜಿವಿಗಳ ಸಂರಕ್ಷಣೆಯ ಕುರಿತು ಮಾಹಿತಿ ನೀಡಿದರು.
ವಿವಿ ಕಲಾ ಕಾಲೇಜು ಕಲ್ಪತರು ರೋವರ್ಸ್ & ರೇಂಜರ್ಸ್ ಘಟಕದ ಅಧಿಕಾರಿ ಡಾ.ಈ.ವನಜಾಕ್ಷಿ, ಚಂದ್ರಮೌಳಿ, ಸಿ.ಸಿದ್ದೇಶ್, ಎನ್ಎಸ್ಎಸ್ ಅಧಿಕಾರಿ ಡಾ.ಕೆ.ಎಸ್.ಗಿರಿಜಾ, ಡಾ.ಎಸ್.ಸುಮಾದೇವಿ, ಡಾ.ಡಿ.ಎಚ್.ಮಾಹೇಶ್ಕುಮಾರ, ಪುರುಷೋತ್ತಮ, ಧರಣೇಂದ್ರ, ಡೈಸನ್, ಯಮುನಶ್ರೀ, ಯುವ ರೆಡ್ಕ್ರಾಸ್ ಘಟಕದ ಅಧಿಕಾರಿ ಡಾ.ಎಸ್.ಪಲ್ಲವಿ ಕುಸುಗಲ್ಲ ಹಾಗೂ ಎಚ್.ರಾಮು ಇದ್ದರು.