

ತುಮಕೂರು: ಸಣ್ಣ ಹಾಗೂ ಅತಿ ಸಣ್ಣ ರೈತರ ಆದಾಯ ವೃದ್ಧಿಸಲು ಕೇಂದ್ರ ಸರ್ಕಾರ 2019ರ ಫೆ.1ರಂದು ಜಾರಿಗೆ ತಂದಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 2ನೇ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ (ಜ.2) ಮಧ್ಯಾಹ್ನ 3.30ಕ್ಕೆ ತುಮಕೂರಿನಲ್ಲಿ ಚಾಲನೆ ನೀಡಲಿದ್ದಾರೆ.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ವಿುಸಿರುವ ಬೃಹತ್ ವೇದಿಕೆಯಲ್ಲಿ 2016-17, 2017-18ನೇ ಸಾಲಿನ 30 ಕೃಷಿ ಸಾಧಕರಿಗೆ ‘ಕೃಷಿ ಕರ್ಮಣ್ಯ’ ಪ್ರಶಸ್ತಿಯನ್ನು ಪ್ರಧಾನಿ ಪ್ರದಾನ ಮಾಡುವರು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಕೃಷಿ ಸಮ್ಮಾನ್ ಫಲಾನುಭವಿಗಳಿಗೆ ತೊಂದರೆಯಾಗದಂತೆ ಸಿದ್ಧತೆ
ಮಾಡಿಕೊಳ್ಳಲಾಗಿದೆ. ಕಾರ್ಯ ಕ್ರಮದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಪ್ರಧಾನಿ ಜತೆ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಸೇರಿ 12 ಮಂದಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಡಿ.ವಿ.ಸದಾನಂದಗೌಡ, ಪ್ರಲ್ಹಾದ್ ಜೋಷಿ, ಸುರೇಶ್ ಅಂಗಡಿ, ಪುರುಷೋತ್ತಮ್ ರೂಪಾಲ ಉಪಸ್ಥಿತರಿರುವರು.
ಕಾರವಾರ ಮಹಿಳೆಗೆ ಮೊದಲ ಕ್ರೆಡಿಟ್ ಕಾರ್ಡ್: ಕಾರವಾರ: ಮೀನುಗಾರರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ಸರ್ಕಾರ ಮುಂದಾಗಿದ್ದು, ಗುರವಾರ ತುಮಕೂರಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂವರಿಗೆ ಮೊದಲ ಮೂರು ಕ್ರೆಡಿಟ್ ಕಾರ್ಡ್ ವಿತರಿಸಲಿದ್ದಾರೆ. ಇದಕ್ಕಾಗಿ ಕಾರವಾರ ನಂದನಗದ್ದಾದ ಸುಪ್ರಿಯಾ ಸುಧೀರ ಸಾರಂಗ, ಪತಿ ಹಾಗೂ ಮಕ್ಕಳ ಜತೆ ತುಮಕೂರಿಗೆ ತೆರಳಿದ್ದಾರೆ, ಒಟ್ಟು 5 ಸಾವಿರ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸುವ ಗುರಿ ಹೊಂದಿದ್ದು, 2 ಸಾವಿರ ಅರ್ಜಿಗಳನ್ನು ವಿತರಿಸಲಾಗಿದೆ. ಈಗಾಗಲೇ 193 ಮೀನುಗಾರರಿಗೆ ಮಂಜೂರಾಗಿದೆ. ಬ್ಯಾಂಕ್ ಖಾತೆ ಹೊಂದಿರುವ ಮೀನುಗಾರರಿಗೆ ಕ್ರೆಡಿಟ್ ಕಾರ್ಡ್ಗಳನ್ನು ನೀಡಿ ಅದರ ಮೂಲಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುತ್ತದೆ.
ಈ ಕಾರ್ಡ್ ಒಂದು ವರ್ಷದ ಮಾನ್ಯತಾ ಅವಧಿ ಹೊಂದಿದ್ದು, ಶೇ.7 ಬಡ್ಡಿ ದರ ವಿಧಿಸಲಾಗುತ್ತದೆ. ಕಾರ್ಡ್ಗೆ 50 ಸಾವಿರದಿಂದ 3 ಲಕ್ಷದವರೆಗೂ ವಿವಿಧ ಹಂತದ ಮಿತಿಯಿದೆ.
ದೇಶದ 6 ಕೋಟಿ ರೈತ ಕುಟುಂಬಗಳು ಕೃಷಿ ಸಮ್ಮಾನ್ ಯೋಜನೆಯ ಲಾಭ ಪಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಗುಂಡಿ ಒತ್ತುವ ಮೂಲಕ ರೈತರ ಖಾತೆಗೆ ನೇರವಾಗಿ 12 ಸಾವಿರ ಕೋಟಿ ರೂ. ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡುವರು. | ನರೇಂದ್ರ ಸಿಂಗ್ ತೋಮರ್ ಕೇಂದ್ರ ಕೃಷಿ ಸಚಿವ