ತುಕ್ಡೆ ತುಕ್ಡೆ ಗ್ಯಾಂಗ್, ನಗರ ನಕ್ಸಲರ ಅಡಿಯಾಳು ಕಾಂಗ್ರೆಸ್; ಮಹಾರಾಷ್ಟ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಾಗ್ದಾಳಿ

cc
Published on

ನವದೆಹಲಿ: ಅತ್ಯಂತ ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ‘ತುಕ್ಡೆ ತುಕ್ಡೆ ಗ್ಯಾಂಗ್’ ಮತ್ತು ನಗರ ನಕ್ಸಲರು ನಡೆಸುತ್ತಿದ್ದಾರೆ. ನೀವು ಇಂದು ನೋಡುತ್ತಿರುವ ಕಾಂಗ್ರೆಸ್ ಮಹಾತ್ಮಾ ಗಾಂಧಿಯವರಂತಹ ಮಹಾನ್ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದ ಪಕ್ಷವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ವಿಶ್ವಕರ್ಮ ಯೋಜನೆ ಒಂದು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಮಹಾರಾಷ್ಟ್ರದ ವಾರ್ಧಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್​ನಲ್ಲಿ ದ್ವೇಷದ ಭೂತ ಪ್ರವೇಶಿಸಿದೆ. ದೇಶಭಕ್ತಿಯ ಆತ್ಮ ಕೊನೆಯುಸಿರೆಳೆದಿದೆ ಎಂದರು.

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಹೆಸರಿಸದೆ, ವಿದೇಶದಲ್ಲಿ ತಮ್ಮ ಭಾಷಣಗಳಲ್ಲಿ ಕಾಂಗ್ರೆಸ್ ನಾಯಕರ ಭಾರತ ವಿರೋಧಿ ಅಜೆಂಡಾಗಳನ್ನು ಉಲ್ಲೇಖಿಸಿದ ಪ್ರಧಾನಿ, ಕಾಂಗ್ರೆಸ್ ಅತಿದೊಡ್ಡ ಭ್ರಷ್ಟ ಪಕ್ಷ ಮತ್ತು ಕುಟುಂಬವೂ ಅಷ್ಟೇ ಭ್ರಷ್ಟ. ಆ ಪಕ್ಷ ಗಣಪತಿ ಪೂಜೆಯನ್ನೂ ದ್ವೇಷಿಸುತ್ತದೆ. ಕರ್ನಾಟಕದಲ್ಲಿ ಗಣಪತಿ ಬಪ್ಪನನ್ನು ಕಂಬಿ ಹಿಂದೆ ಹಾಕಲಾಗಿದೆ. ಗಣಪತಿ ಮೂರ್ತಿಯನ್ನು ಪೊಲೀಸ್ ವ್ಯಾನ್​ನಲ್ಲಿ ಕೊಂಡೊಯ್ದರು ಎಂದು ಮೋದಿ ಕಿಡಿಕಾರಿದರು.

ಆದರೆ ಮಹಾರಾಷ್ಟ್ರದ ಕಾಂಗ್ರೆಸ್ ಮಿತ್ರಪಕ್ಷಗಳು ಈ ಬಗ್ಗೆ ಮೌನವಹಿಸಿವೆ ಮತ್ತು ಗಣಪತಿ ಬಪ್ಪನಿಗೆ ಮಾಡಿದ ಅವಮಾನದ ಬಗ್ಗೆ ಯಾವುದೇ ನಿಲುವು ತೆಗೆದುಕೊಳ್ಳಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ದ್ವಂದ್ವವನ್ನು ಅರಿತುಕೊಳ್ಳಬೇಕು. ಸುಳ್ಳು ಮತ್ತು ದ್ರೋಹ ಕಾಂಗ್ರೆಸ್​ನ ಲಕ್ಷಣ. ಮಹಾರಾಷ್ಟ್ರದ ಜನರು ಈ ಬಗ್ಗೆ ಎಚ್ಚರದಿಂದ ಇರಬೇಕು. ಕಾಂಗ್ರೆಸ್ ರೈತರನ್ನು ರಾಜಕೀಯ ಮತ್ತು ಭ್ರಷ್ಟಾಚಾರಕ್ಕೆ ಮಾತ್ರ ಬಳಸಿಕೊಂಡಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.

ಎಸ್​ಸಿ-ಎಸ್​ಟಿ ಮತ್ತು ಒಬಿಸಿ ವರ್ಗಗಳು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಹೆಚ್ಚಿನ ಫಲಾನುಭವಿಗಳು ಎಂದು ಹೇಳಿದ ಮೋದಿ, ಹಿಂದಿನ ಕಾಂಗ್ರೆಸ್ ಸರ್ಕಾರಗಳು ವಿಶ್ವಕರ್ಮ ಸಮುದಾಯವನ್ನು ನಿರ್ಲಕ್ಷಿಸಿವೆ. ಫಲಾನುಭವಿಗಳು ಕೇವಲ ಕುಶಲಕರ್ವಿುಗಳಾಗಿ ಉಳಿಯದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ. ಅವರು ಉದ್ಯಮಿಗಳಾಗಬೇಕು ಎನ್ನುವುದು ನಮ್ಮ ಆಶಯ ಎಂದರು.

2026ಕ್ಕೆ ನಕ್ಸಲಿಸಮ್ ನಾಮಾವಶೇಷ

ನವದೆಹಲಿ: ಎಡಪಂಥೀಯ ಉಗ್ರಗಾಮಿಗಳು ಹಿಂಸಾಚಾರ, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮತ್ತು ಕಾನೂನಿಗೆ ಶರಣಾಗಬೇಕು. ದೇಶದ ಈಶಾನ್ಯ ಪ್ರದೇಶದ ಬಂಡುಕೋರರಂತೆ ಸಮಾಜದ ಮುಖ್ಯವಾಹಿನಿಗೆ ಸೇರಿಕೊಳ್ಳಬೇಕು ಎಂದು ಗೃಹ ಸಚಿವ ಅಮಿತ್ ಷಾ ತಾಕೀತು ಮಾಡಿದ್ದಾರೆ. ಒಂದುವೇಳೆ ಈ ಹಾದಿ ತುಳಿಯದೆ, ಹಿಂಸಾಚಾರವನ್ನೇ ಅನುಸರಿಸಿದರೆ ಅವರ ವಿರುದ್ಧ ಪೂರ್ಣಪ್ರಮಾಣದ ಕಾರ್ಯಾಚರಣೆ ನಡೆಸಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.

ಛತ್ತೀಸ್​ಗಢದಲ್ಲಿ ನಕ್ಸಲ್ ಹಿಂಸಾಚಾರದ 55 ಸಂತ್ರಸ್ತರನ್ನು ತಮ್ಮ ನಿವಾಸದಲ್ಲಿ ಉದ್ದೇಶಿಸಿ ಮಾತನಾಡಿದ ಷಾ, ಎಡಪಂಥೀಯ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿರುವವರು 2026ರ ಮಾರ್ಚ್ 31 ಪೂರ್ಣವಾಗಿ ನಿಮೂಲನೆಗೊಳ್ಳಲಿದ್ದಾರೆ. ಆ ಹೊತ್ತಿಗೆ ನಕ್ಸಲ್ ಹಿಂಸಾಚಾರ ಮತ್ತು ಸಿದ್ಧಾಂತ ದೇಶದಿಂದ ಕಾಲ್ಕೀಳಲಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ ಎಂದು ಷಾ ಹೇಳಿದರು. ನಕ್ಸಲೀಯರ ಮಾನವ ಹಕ್ಕುಗಳಿಗಾಗಿ ಪ್ರತಿಪಾದಿಸುವವರು ನಕ್ಸಲರ ಕೈಯಲ್ಲಿ ನರಳುತ್ತಿರುವವರ ಹಕ್ಕುಗಳನ್ನು ಮೊದಲು ಗಮನಿಸಬೇಕು ಎಂದು ಅಮಿತ್ ಷಾ ಸೂಚ್ಯವಾಗಿ ತಿಳಿಸಿದರು.

ಅಕ್ರಮ ವಲಸಿಗರ ನಿಮೂಲನೆ : ಜಾರ್ಖಂಡ್​ನ ಜೆಎಂಎಂ ನೇತೃತ್ವದ ಸರ್ಕಾರ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಜ್ಯದ ಅಕ್ರಮ ವಲಸಿಗರನ್ನು ಹೊರಕಳುಹಿಸಲಿದೆ. ರಾಜ್ಯದಲ್ಲಿ 75 ವರ್ಷ ಮೇಲ್ಪಟ್ಟ ಬಡವರಿಗೆ 10 ಲಕ್ಷ ರೂ. ಉಚಿತ ಆರೋಗ್ಯ ರಕ್ಷಣೆ ನೀಡುವುದಾಗಿ ಗೃಹ ಸಚಿವ ಷಾ ಭರವಸೆ ನೀಡಿದ್ದಾರೆ. ಆಡಳಿತಾರೂಢ ಜೆಎಂಎಂ ಮತ ಬ್ಯಾಂಕ್​ಗಾಗಿ ಅಕ್ರಮ ಒಳನುಸುಳುವಿಕೆಯನ್ನು ಪೋ›ತ್ಸಾಹಿಸುತ್ತಿದೆ ಮತ್ತು ಸಂತಾಲ್ ಪರಗಣದಲ್ಲಿ ಬುಡಕಟ್ಟು ಜನಸಂಖ್ಯೆಯು ಹಿಂದಿನ ಶೇ.44ರಿಂದ ಶೇ. 28ಕ್ಕೆ ಇಳಿದಿರುವುದು ಆತಂಕಕಾರಿ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net