8 ವರ್ಷದ ಬಾಲಕಿ ಅಂದು ಟ್ಯೂಷನ್​ ಕ್ಲಾಸ್​ನಿಂದ ಬರುವಷ್ಟರಲ್ಲಿ ನಡೆದಾಡಲು ಸಾಧ್ಯವಾಗದ ಸ್ಥಿತಿ ತಲುಪಿದ್ದಳು..ಅದಕ್ಕೆ ಕಾರಣ ಶಿಕ್ಷಕಿ...

Student 23 Jan 20
Published on

ಥಾಣೆ: ಮೂರನೇ ತರಗತಿಯ ಬಾಲಕಿ ಹೋಂವರ್ಕ್​ ಮಾಡಿಲ್ಲ ಎಂಬ ಕಾರಣಕ್ಕೆ ತುಂಬ ಕಠಿಣ ಶಿಕ್ಷೆ ಕೊಟ್ಟ ಖಾಸಗಿ ಟ್ಯೂಷನ್​ ಟೀಚರ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಂದು ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಲಕಿಗೆ ಎಂಟುವರ್ಷ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಾಲೆಯೊಂದರಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದಳು. ಈಕೆ ಲತಾ ಎಂಬ ಶಿಕ್ಷಕಿಯ ಬಳಿ ಟ್ಯೂಷನ್​ಗೆ ಹೋಗುತ್ತಿದ್ದಳು.

ಕಳೆದ ಶುಕ್ರವಾರ ಬಾಲಕಿ ಹೋಂವರ್ಕ್​ನ್ನು ಪೂರ್ತಿ ಮಾಡದೆ ಹೋಗಿದ್ದರಿಂದ ಸಿಟ್ಟಿಗೆದ್ದ ಶಿಕ್ಷಕಿ ಲತಾ, ಆಕೆಯ ಬಳಿ 450 ಬಸ್ಕಿ ತೆಗೆಯುವಂತೆ ಹೇಳಿದರು. 450 ಬಾರಿ ಕುಳಿತು ಏಳಬೇಕು ಎಂಬ ಶಿಕ್ಷೆ ನೀಡಿದ್ದಾರೆ. ಈ ಸಂಬಂಧ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲದೆ ಕಳೆದ ತಿಂಗಳು ಶಿಕ್ಷಕಿ ಬಾಲಕಿಯನ್ನು ಟ್ಯೂಷನ್​ ಕ್ಲಾಸ್​ನಿಂದ ಹೊರಹಾಕಿದ್ದರು. ಬೆತ್ತದಿಂದ ಥಳಿಸಿದ್ದರು ಎಂದು ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

450 ಬಸ್ಕಿಗಳನ್ನು ತೆಗೆದು ಮನೆಗೆ ಹೋದ ಮಗುವಿಗೆ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಎರಡೂ ಕಾಲುಗಳಿಗೂ ಊತ ಬಂದಿತ್ತು. ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

ಬಾಲಕಿಯ ತಾಯಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದರೂ ಇನ್ನೂ ಶಿಕ್ಷಕಿಯನ್ನು ಬಂಧಿಸಿಲ್ಲ. ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net