

ಈ ಭೂಮಿ ಮೇಲಿನ ರಾಕ್ಷಸರೆಂದರೆ ರೇಪಿಸ್ಟ್ಗಳು ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ಅದು ಮತ್ತೊಮ್ಮೆ ಸಾಬೀತಾಗಿದೆ. ಕ್ಷಯದಿಂದ ನರಳುತ್ತ ಐಸಿಯುವಿನಲ್ಲಿದ್ದ 21ವರ್ಷದ ಯುವತಿ ಮೇಲೆ ವೈದ್ಯಕೀಯ ಸಿಬ್ಬಂದಿಯೋರ್ವ ಅತ್ಯಾಚಾರ ಮಾಡಿದ್ದಾನೆ.
ಘಟನೆ ನಡೆದಿದ್ದು ದೆಹಲಿಯ ಗುರ್ಗಾಂವ್ನಲ್ಲಿ. ಕ್ಷಯ ರೋಗ ಹೊಂದಿದ್ದ ಈ ಯುವತಿಯನ್ನು ವೆಂಟಿಲೇಟರ್ನಲ್ಲಿ ಇಡಲಾಗಿತ್ತು. ಆದರೆ ಆಸ್ಪತ್ರೆಯ ಸಿಬ್ಬಂದಿಯೋರ್ವ ಆಕೆಯ ಮೇಲೆ ಅತ್ಯಾಚಾರ ಮಾಡಿ, ಹಲ್ಲೆ ನಡೆಸಿದ್ದಾನೆ. ಅದಾದ ಬಳಿಕ ಯುವತಿ ಪ್ರಜ್ಞಾಹೀನಳಾಗಿದ್ದಳು. ಒಂದು ವಾರದ ನಂತರ ಎಚ್ಚರಗೊಂಡ ಆಕೆ ಮಾತನಾಡಲು ಸಾಧ್ಯವಾಗದೆ, ಕೈಬರಹದ ಮೂಲಕ ತನ್ನ ತಂದೆಗೆ ವಿಷಯ ತಿಳಿಸಿದ್ದಾಳೆ. ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಬರೆದು ತೋರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಶಾಂತ್ ಲೋಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರ ಮಾಡಿದವನು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ಶುರುವಾಗಿದೆ. ಯುವತಿಗೆ ಉಸಿರಾಟದ ಸಮಸ್ಯೆ ತೀವ್ರವಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಇನ್ನೂ ಮುಂದುವರಿದಿದೆ ಎಂದು ಎಸಿಪಿ ಉಷಾ ಕುಂಡು ಹೇಳಿದ್ದಾರೆ. (ಏಜೆನ್ಸೀಸ್)