

ಆಂಧ್ರಪ್ರದೇಶ: ಹಿಂದು ಸಂಪ್ರದಾಯ ಉಲ್ಲಂಘನೆ ಮಾಡಿದ ಆರೋಪದ ಮೇಲೆ ತನ್ನ ವ್ಯಾಪ್ತಿಯ 18 ನೌಕರರ ವಿರುದ್ಧ ತಿರುಪತಿ ತಿರುಮಲ ದೇವಸ್ಥಾನ(TTD) ಆಡಳಿತ ಮಂಡಳಿ ಬುಧವಾರ(ಫೆ.5) ಕ್ರಮಕೈಗೊಂಡಿದೆ.
ಈ 18 ನೌಕರರು ಹಿಂದುಯೇತರ ಸಂಪ್ರದಾಯಗಳನ್ನು ಪಾಲಿಸುತ್ತಿದ್ದರು ಎಂಬ ವಿಚಾರ ಕಂಡು ಬಂದಿದೆ. ಈ ಹಿಂದೆ ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಅವರ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಹಿಂದುಯೇತರರು ಬಿಟ್ಟು ಮಂಡಳಿಯ ವ್ಯಾಪ್ತಿಯಲ್ಲಿ ಹಿಂದುಗಳು ಮಾತ್ರ ಕೆಲಸ ಮಾಡಬೇಕು ಎಂದು ಹೇಳಲಾಗಿತ್ತು. ಹೀಗಾಗಿ, ಈ ಆಧಾರದ ಅನ್ವಯ ಶಿಸ್ತು ಕ್ರಮಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಈ 18 ನೌಕರರನ್ನು ಟಿಟಿಡಿ ವ್ಯಾಪ್ತಿಯಲ್ಲಿನ ದೇವಸ್ಥಾನ ಸಂಬಂಧಿಸಿದ ಕೆಲಸದಲ್ಲಿ ಮತ್ತು ಅದರ ಅಂಗ ಸಂಸ್ಥೆಯ ಇಲಾಖೆಯಲ್ಲಿ ಸದ್ಯಕ್ಕೆ ಅವರನ್ನು ತಗೆದು ಹಾಕಲಾಗಿದೆ. ಅಲ್ಲದೇ, ಯಾವುದೇ ಹಿಂದು ಸಂಪ್ರದಾಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕೂಡ ನಿಷೇಧಿಸಲಾಗಿದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.
ನೌಕರರಿಗೆ ಎರಡು ಆಯ್ಕೆ: ಸರ್ಕಾರಿ ಇಲಾಖೆ ವರ್ಗಾವಣೆ ಇಲ್ಲವೇ ಸ್ವಯಂಪ್ರೇರಿತ ನಿವೃತ್ತಿ( ವಿಆರ್ಎಸ್) ಅರ್ಜಿ ಸಲ್ಲಿಸುವುದು. ಇದನ್ನು ಪಾಲಿಸಲು ವಿಫಲವಾದ್ರೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಜೆಪಿ ನಾಯಕ ಮತ್ತು ಟಿಟಿಡಿ ಮಂಡಳಿಯ ಸದಸ್ಯ ಭಾನು ಪ್ರಕಾಶ್ ರೆಡ್ಡಿ ಈ ಕ್ರಮವನ್ನು ಬೆಂಬಲಿಸಿದ್ದಾರೆ.
1989ರ ದತ್ತಿ ಕಾಯ್ದೆಯ ಪ್ರಕಾರ, ಟಿಟಿಡಿ ನೌಕರರು ಹಿಂದು ಪದ್ಧತಿಗಳನ್ನು ಪಾಲಿಸಬೇಕು ಮತ್ತು ಟಿಟಿಡಿಯ ಪಾವಿತ್ರ್ಯ ಮತ್ತು ಭಕ್ತರ ಭಾವನೆಗಳ ಮೇಲೆ ಪರಿಣಾಮ ಬೀರುವ ಉಲ್ಲಂಘನೆಯ ಬಗ್ಗೆ ತಿಳಿದರೆ ಕ್ರಮವಹಿಸುವುದು.(ಏಜೆನ್ಸೀಸ್)