ಪಿಸ್ತೂಲುಗಳು ಮಾರಾಟಕ್ಕೆ ಯತ್ನ: ಮಹಾರಾಷ್ಟ್ರ ಮೂಲದ ಇಬ್ಬರ ಬಂಧನ

CCB
Published on

ಬೆಂಗಳೂರು: ಅಕ್ರಮವಾಗಿ ಪಿಸ್ತೂಲುಗಳು ಹಾಗೂ ಜೀವಂತ ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ೨ ಕಂಟ್ರಿಮೇಡ್ ಪಿಸ್ತೂಲು ಹಾಗೂ ೯ ಜೀವಂತ ಗುಂಡುಗಳು, ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.


ಮಹಾರಾಷ್ಟ್ರ ಮೂಲದ ರಾಹುಲ್ ಸತೀಶ ಮಾನೆ ಹಾಗೂ ಮಲಿಕ್ ಬಂಧಿತರು.


ಆರೋಪಿ ರಾಹುಲ್ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಏಜೆಂಟ್ ಆಗಿದ್ದು, ಈತ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದು ವರ್ಷವಿದ್ದು ಆ ಸಮಯದಲ್ಲಿ ಪರಿಚಯವಾಗಿದ್ದ ರೌಡಿಗಳಿಗೆ ಪಿಸ್ತೂಲುಗಳನ್ನು ಮಾರಾಟ ಮಾಡಲು ಬಂದಿರುವ ಬಗ್ಗೆ ಅನುಮಾನವಿದೆ. ಈತನ ವಿರುದ್ಧ ಶಸಾಸ ಕಾಯ್ದೆ ಅಡಿಯಲ್ಲಿ ಮಹಾರಾಷ್ಟ್ರದ ಮೀರಜ್‌ನ ಮಹಾತ್ಮಾಗಾಂಧಿ ಪೊಲೀಸ್ ಠಾಣೆಯಲ್ಲಿ ೨ ಪ್ರಕರಣ, ಮೀರಜ್ ಟೌನ್ ೧, ಸಾಂಗ್ಲಿ ವೆಲ್‌ವಾಡಿಯಲ್ಲಿ ೧, ಮೀರಜ್‌ನ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ೧ ಹಾಗೂ ಬೆಂಗಳೂರಿನ ಬ್ಯಾಟರಾಯನಪುರ ಠಾಣೆಯಲ್ಲಿ ೧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಜ.೧೪ರಂದು ಬೆಳಗ್ಗೆ ೧೧.೩೦ರ ಸುಮಾರಿಗೆ ಉಲ್ಲಾಳ ರಿಂಗ್ ರಸ್ತೆ, ಕೆರೆ ಹತ್ತಿರ ಸಿಸಿಬಿ ಪೊಲೀಸ್ ತಂಡ ಕಾರ್ಯಾಚರಣೆ ನಡೆಸುತ್ತಿದ್ದಾಗ ಅಂತರಾಜ್ಯ ಅಕ್ರಮ ಶಸ್ತ್ರಾಸ್ತ್ರ ಮಾರಾಟಗಾರರನ್ನು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳಿಂದ ಎರಡು ಕಂಟ್ರಿಮೇಡ್ ಪಿಸ್ತೂಲು, ೯ ಜೀವಂತ ಗುಂಡುಗಳು, ಕಾರು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net