

ಸಾಗರ: ಕುಸ್ತಿ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಿಸುತ್ತದೆ. ಹಾಗಾಗಿ ಕಲಿಕೆಗೆ ಗರಡಿ ಮನೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಬುಧವಾರ ಗಾಂಧಿನಗರ ಯುವಜನ ಸಂಘ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಜಾನಪದ ಕ್ರೀಡೆ ಕುಸ್ತಿಯನ್ನು ನಿರಂತರವಾಗಿ ನಡೆಸಿಕೊಂಡು ಬರುವುದು ಸುಲಭದ ಕೆಲಸವಲ್ಲ. ಕುಸ್ತಿಗೆ ದೇಶದ ವಿವಿಧ ರಾಜ್ಯಗಳಿಂದ ಪೈಲ್ವಾನರು ಬರುತ್ತಾರೆ. ಸಂಘವು ಐವತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, ಗಾಂಧಿನಗರ ಯುವಜನ ಸಂಘ ದಸರಾ ಕುಸ್ತಿ ಸೇರಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದೆ. ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿರುವ ಸಂಘದ ಶ್ರೇಯೋಭಿವೃದ್ಧಿಗೆ ಎಲ್ಲ ರೀತಿ ಸಹಕಾರ ನೀಡಲಾಗುತ್ತದೆ ಎಂದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಶ್ರೀನಿವಾಸ್, ಗಣಪತಿ ಮಂಡಗಳಲೆ, ಚಂದ್ರಪ್ಪ, ರವಿಕುಮಾರ್, ಸಂಘದ ಅಧ್ಯಕ್ಷ ಸಂತೋಷ್ ಸದ್ಗುರು, ದಾನಿಗಳಾದ ಅಂಬ್ರೆಣಿ ಸಹಕಾರ ಸಂಘಟನೆಯ ಸುಧೀಂದ್ರ, ನಾಗೇಂದ್ರ, ಎಚ್.ಆರ್.ಶ್ರೀಧರ್, ಸೈಯದ್ ಇಕ್ಬಾಲ್, ಗೌತಮ್, ಸತೀಶ್, ಮಂಜಣ್ಣ, ಸುಂದರ ಸಿಂಗ್, ಅರ್ಚನಾ ಇಕ್ಕೇರಿ ಇತರರಿದ್ದರು.