

ಬಾಳೆಹೊನ್ನೂರು: ಜೀವನದಲ್ಲಿ ಬಹಳಷ್ಟು ಜನ ಹಣವೇ ಮುಖ್ಯವೆಂದು ತಿಳಿದವರುಂಟು. ಹಣದೊಂದಿಗೆ ಗುಣವು ಮುಖ್ಯವೆಂಬುದನ್ನು ಮರೆಯಬಾರದು. ಸಂಪತ್ತಿನಿಂದ ಸೌಲಭ್ಯ ಪಡೆಯಬಹುದೇ ಹೊರತು ಸತ್ಯ, ಸಂಸ್ಕೃತಿ ಕೊಳ್ಳಲಾಗದು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶ್ರೀ ರಂಭಾಪುರಿ ಪೀಠದಲ್ಲಿ ಬುಧವಾರ ಆಯೋಜಿಸಿದ್ದ ಶ್ರಾವಣ ಪುರಾಣ ಪ್ರವಚನ ಹಾಗೂ ಎಡೆಯೂರು ರೇಣುಕ ಶ್ರೀಗಳ 76ನೇ ಜನ್ಮ ವರ್ಧಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹಣವಿಲ್ಲದೆ ದೈನಂದಿನ ಜೀವನ ನಡೆಯದು. ಹಣದಿಂದ ಔಷಧ ಕೊಳ್ಳಬಹುದು. ಆದರೆ ಆರೋಗ್ಯ ಭಾಗ್ಯ ಕೊಳ್ಳಲಾಗದು. ಹಣದಿಂದ ಆಹಾರ ಪದಾರ್ಥ ಕೊಳ್ಳಬಹುದು. ಆದರೆ ಪಚನ ಶಕ್ತಿ ಕೊಳ್ಳಲಾಗದು. ಹಣದಿಂದ ಹಾಸಿಗೆ ಕೊಂಡರೂ ನಿದ್ದೆ ಕೊಳ್ಳಲಾಗದು. ಹಣದಿಂದ ಪುಸ್ತಕ ಕೊಳ್ಳಬಹುದು. ಆದರೆ ಅವುಗಳನ್ನು ಓದದೇ ಜ್ಞಾನ ಪಡೆಯಲಾಗದು ಎಂದರು.
ಕಸ್ತೂರಿ ಮೃಗದ ನಾಭಿಯಿಂದ ಸುಗಂಧ ಸೂಸುತ್ತಿದ್ದರೂ ಅರಿಯದೆ ವನವೆಲ್ಲ ಸುತ್ತಿ ಬಳಲಿದಂತೆ ಮನುಷ್ಯ ತನ್ನ ಅಂತರಂಗದಲ್ಲಿರುವ ದೇವರನ್ನು ಕಾಣದೇ ಪರಿತಪಿಸುತ್ತಿದ್ದಾನೆ. ಪರಮ ಗುರುವಿನ ಅನುಗ್ರಹ ಸಂಸ್ಕಾರ ಇಲ್ಲದಿದ್ದರೆ ಜೀವನ ಉಜ್ವಲಗೊಳ್ಳದು. ವೀರಶೈವ ಧರ್ಮದಲ್ಲಿ ಗುರುವಿಗೆ ಅಗ್ರ ಸ್ಥಾನವಿದೆ. ಜೀವನ ವಿಕಾಸಕ್ಕೆ ಗುರುವೇ ಮೂಲ ಎಂದು ಹೇಳಿದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳ ಜನ್ಮದಿನೋತ್ಸವ ಇಂದೇ ಬಂದಿರುವುದು ಯೋಗಾಯೋಗ. ಪೀಠದ ಜಗದ್ಗುರು ತ್ರಯರ ಸೇವೆ ಸಲ್ಲಿಸಿದ ಸೌಭಾಗ್ಯ ಅವರದು ಎಂದರು. ಅವರಿಗೆ ಚೈತನ್ಯ ಚಿಲುಮೆ ಪ್ರಶಸ್ತಿ ಪ್ರದಾನ ಮಾಡಿ ರಂಭಾಪುರಿ ಶ್ರೀಗಳು ಶುಭಹಾರೈಸಿದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇದು ನನ್ನ ಜೀವನದ ಸೌಭಾಗ್ಯದ ದಿನ. ಪ್ರತಿ ವರ್ಷ ಆಚರಿಸುವ ಜನ್ಮ ವರ್ಧಂತಿ ಸಂದರ್ಭ ಜಗದ್ಗುರುಗಳ ಆಶೀರ್ವಾದ ಯಾವಾಗಲೂ ಇದೆ. ಶ್ರೀ ರಂಭಾಪುರಿ ಜಗದ್ಗುರುಗಳ ಅಂತಃಕರಣದ ಆಶೀರ್ವಾದ ನನಗೆ ಇನ್ನಷ್ಟು ಶಕ್ತಿ ತಂದು ಕೊಟ್ಟಿದೆ ಎಂದರು.
ಮಾದನ ಹಿಪ್ಪರಗಿ ಶ್ರೀ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯರು, ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಇದ್ದರು.