ಸಹಕಾರ ಸಂಘಟನೆಗೆ ನಂಬಿಕೆಯ ಜೀವಾಳ

teachers sangha
ಸಾಗರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧೋದ್ದೇಶ ಸಹಕಾರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಮನೋಹರಪ್ಪ ಅವರು ನೂತನ ಅಧ್ಯಕ್ಷ ಚಂದ್ರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಡಾ. ಅನ್ನಪೂರ್ಣಮ್ಮ, ಜಿ.ಪರಮೇಶ್ವರಪ್ಪ, ಮಾಲತೇಶಪ್ಪ, ಜಗನ್ನಾಥ ಇತರರಿದ್ದರು.
Published on

ಸಾಗರ: ಸಹಕಾರ ಸಂಘಟನೆಗಳಿಗೆ ನಂಬಿಕೆಯೇ ಜೀವಾಳ. ಪ್ರತಿ ಕೆಲಸದಲ್ಲೂ ಪಾರದರ್ಶಕತೆ ಇರಬೇಕು ಎಂದು ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಡಾ. ಅನ್ನಪೂರ್ಣಮ್ಮ ಹೇಳಿದರು.

ನಗರದಲ್ಲಿ ಶನಿವಾರ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧೋದ್ದೇಶ ಸಹಕಾರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಣ ಸಂಗ್ರಹವಾಗುವ ಸಂಘದಲ್ಲಿ ಶಿಕ್ಷಕರು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು. ಶಿಕ್ಷಕರ ಮೇಲೆ ಸಮಾಜದಲ್ಲಿ ಅಪಾರ ನಂಬಿಕೆ, ಗೌರವವಿದೆ. ಅನೇಕ ಚಿಟ್‌ಫಂಡ್ ಮೂಲಕ ಕೋಟ್ಯಂತರ ಹಣ ದುರ್ಬಳಕೆ ಆಗಿರುವುದನ್ನು ಕೇಳಿದ್ದೇವೆ. ಶಿಕ್ಷಕರು ಸಂಘದಲ್ಲಿ ಷೇರು ಹಾಕಿ ಯಾವುದೇ ತಪ್ಪುಗಳು ಆಗದಂತೆ ಸಂಘವನ್ನು ಬೆಳೆಸಿ. ಅದರಿಂದ ಸಿಗುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಿ.ಪರಮೇಶ್ವರಪ್ಪ ಮಾತನಾಡಿ, ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ 1.5 ಕೋಟಿ ರೂ. ಧನ ಸಹಾಯ ಲಭ್ಯವಾಗಿದ್ದು, ಭವನ ಅಂತಿಮ ಹಂತದಲ್ಲಿದೆ. ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ಸಂಘವನ್ನು ಬೆಳೆಸಲು ಹೆಚ್ಚು ಹೆಚ್ಚು ಷೇರು ಹಾಕಿ, ಠೇವಣಿ ಇಡಬೇಕು. 7ನೇ ವೇತನ ಆಯೋಗದ ಶಿಫಾರಸು ಜಾರಿಯಾಗಲಿದ್ದು, ಶಿಕ್ಷಕರಿಗೆ ಹೆಚ್ಚಿನ ವೇತನ ಸಿಗಲಿದೆ. ಉಳಿತಾಯ ಮಾಡುವ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಅದು ಭವಿಷ್ಯಕ್ಕೆ ನೆರವಾಗಲಿದೆ ಎಂದು ತಿಳಿಸಿದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಡಿ.ಮನೋಹರಪ್ಪ ಮಾತನಾಡಿ, ತಾಲೂಕಿನ ಎಲ್ಲ ಶಿಕ್ಷಕರು ಸಂಘಕ್ಕೆ ಷೇರು ಹಾಕಬೇಕು. ಕಳೆದ ವರ್ಷ 3.51 ಕೋಟಿ ರೂ. ವಹಿವಾಟು ನಡೆದಿದೆ ಎಂದರು.
ನೂತನ ಅಧ್ಯಕ್ಷ ಚಂದ್ರಪ್ಪ ಮಾತನಾಡಿ, 1991ರಲ್ಲಿ ಪರಿಶ್ರಮದಿಂದ ನಮ್ಮ ಹಿರಿಯರು ಸಂಘವನ್ನು ಹುಟ್ಟುಹಾಕಿದ್ದಾರೆ. ಪದಾಧಿಕಾರಿಗಳು ಬದಲಾಗುತ್ತಲೇ ಇರುತ್ತಾರೆ. ಆದರೆ ಸಂಘ ಬಲಿಷ್ಠವಾಗಬೇಕು. ಈಗ ಸಹಕಾರ ಸಂಘದ ನಿಯಮಗಳು ಕಠಿಣವಾಗಿವೆ. ಕಳಂಕರಹಿತವಾಗಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಾಲತೇಶಪ್ಪ, ಜಿಲ್ಲಾ ಸಂಘದ ಸಹ ಕಾರ್ಯದರ್ಶಿ ಜಗನ್ನಾಥ, ಸಂಘದ ಉಪಾಧ್ಯಕ್ಷೆ ವಿಕ್ಟೋರಿಯಾ ಫುರ್ಟಾಡೊ, ಪ್ರಮುಖರಾದ ದಿನೇಶ, ಹೂವಪ್ಪ, ಬಸವರಾಜು, ಉಮೇಶ್, ರಮೇಶ್, ಗವಿಯಪ್ಪ, ಎಚ್.ಬಿ.ಮಹೇಶ್, ಮೂರ್ತಿ, ನೇತ್ರಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net