

ಸಾಗರ್ (ಮಧ್ಯ ಪ್ರದೇಶ): ಈ ಬಟ್ಟೆಯ ತುಂಡಿನ ಮೇಲೆ (ಮಾಸ್ಕ್) ನಂಬಿಕೆ ಇಡಬೇಡಿ, ದೇವರ ಮೇಲೆ ನಂಬಿಕೆ ಇಡಿ ಎಂದು ಟಿಕ್‌ಟಾಕ್ ಮಾಡಿ ಅದನ್ನು ಎಲ್ಲೆಡೆ ಹರಿಬಿಟ್ಟಿದ್ದ ಯುವಕನೊಬ್ಬನಿಗೆ ಕರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಈಗ ಐಸೋಲೇಷನ್ ವಾರ್ಡ್‌ನಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಧ್ಯಪ್ರದೇಶದ ಸಾಗರ್ ನಗರದಲ್ಲಿ ಕಂಡು ಬಂದಿರುವ ಮೊದಲ ಕರೊನಾ ಪ್ರಕರಣ ಇದಾಗಿದೆ. 25 ವರ್ಷದ ಈ ಯುವಕ ಈಗ ಬುಂದೇಲ್‌ಖಂಡ್‌ನ ಆಸ್ಪತ್ರೆಗೆ ದಾಖಲಾಗಿದ್ದಾನೆ. ಒಬ್ಬ ವ್ಯಕ್ತಿ ಈತನಿಗೆ ಮಾಸ್ಕ್ ಧರಿಸುವಂತೆ ಹೇಳುತ್ತಾನೆ. ಅದಕ್ಕೆ ಈ ಯುವಕ ‘ದೇವರ ಮೇಲೆ ನಂಬಿಕೆ ಇಡಿ, ತುಂಡು ಬಟ್ಟೆಯ ಮೆಲೆ ಅಲ್ಲ’ ಎಂದು ಟಿಕ್‌ಟಾಕ್‌ನಲ್ಲಿ ವೀಡಿಯೋ ಮಾಡಿದ್ದ. ಅದು ಸಾಕಷ್ಟು ವೈರಲ್ ಆಗಿದೆ. ಇದಾದ ನಂತರ ಆತ ಜಬಲ್‌ಪುರದಲ್ಲಿರುವ ತನ್ನ ಸಹೋದರಿಯ ಮನೆಗೆ ತೆರಳಿದ್ದ, ಈ ವೇಳೆ ಕರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದೆ.
ಇಷ್ಟಕ್ಕೇ ಸುಮ್ಮನಾಗದ ಯುವಕ, ಆಸ್ಪತ್ರೆಯಲ್ಲಿ ಇರುವಾಗಲೇ ಮತ್ತಷ್ಟು ವೀಡಿಯೋಗಳನ್ನು ಅಪ್‌ಲೋಡ್ ಮಾಡಿದ್ದು, ‘ನನಗೆ ಕರೊನಾ ಸೋಂಕು ದೃಢಪಟ್ಟಿದೆ. ಆದ್ದರಿಂದ ಕೆಲ ದಿನಗಳ ಮಟ್ಟಿಗೆ ವಿಡಿಯೋ ಅಪ್ ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಕ್ಷಮಿಸಿ. ಆದರೆ ದಯವಿಟ್ಟು ನನ್ನನ್ನು ಬೆಂಬಲಿಸುವುದನ್ನು ಮುಂದುವರೆಸಿ, ನನಗಾಗಿ ಪ್ರಾರ್ಥಿಸಿ’ ಎಂದು ಕೇಳಿಕೊಂಡಿದ್ದಾನೆ. ಇವನ ಈ ಕೃತ್ಯದಿಂದ ಬೇಸತ್ತ ಪೊಲೀಸರು ಮೊಬೈಲ್ ಕಿತ್ತುಕೊಂಡಿದ್ದಾರೆ. (ಏಜನ್ಸೀಸ್)