

Israel Attack: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಂಬ್ ದಾಳಿಯನ್ನು ನಿಲ್ಲಿಸುವಂತೆ ನಿರ್ದೇಶಿಸಿದ, ಹಮಾಸ್ ಶಾಂತಿಗೆ ಸಿದ್ಧವಾಗಿದೆ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಇಸ್ರೇಲ್ ಸೇನೆಯು ಗಾಜಾ ಮೇಲೆ ಹೊಸ ದಾಳಿ ನಡೆಸಿ ಆರು ಜನರನ್ನು ಕೊಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಅಧಿಕಾರಿಗಳ, ಇಸ್ರೇಲಿ ಪಡೆಗಳು ಗಾಜಾ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿ 4 ಜನರನ್ನು ಕೊಂದಿದೆ. ಅಲ್ಲದೆ, ದಕ್ಷಿಣ ಗಾಜಾದ ಖಾನ್ ಯೂನಿಸ್‌ನಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಹಮಾಸ್‌ನ ಪ್ರತಿಕ್ರಿಯೆಯ ನಂತರ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಟ್ರಂಪ್‌ರ ಗಾಜಾ ಯೋಜನೆಯ ಮೊದಲ ಹಂತದ ತಕ್ಷಣದ ಅನುಷ್ಠಾನಕ್ಕೆ ಇಸ್ರೇಲ್ ಸಿದ್ಧತೆ ನಡೆಸುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ ಹೇಳಿದ ಸ್ವಲ್ಪ ಸಮಯದ ನಂತರ ಈ ದಾಳಿಗಳು ನಡೆದಿವೆ.
ಗಾಜಾ ಶಾಂತಿ ಚೌಕಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮೋದಿ, ಗಾಜಾದಲ್ಲಿ ಶಾಂತಿ ಪ್ರಯತ್ನಗಳು ನಿರ್ಣಾಯಕ ಪ್ರಗತಿ ಸಾಧಿಸುತ್ತಿರುವುದರಿಂದ ನಾವು ಅಧ್ಯಕ್ಷ ಟ್ರಂಪ್ ನಾಯಕತ್ವವನ್ನು ಸ್ವಾಗತಿಸುತ್ತೇವೆ. ಒತ್ತೆಯಾಳುಗಳ ಬಿಡುಗಡೆಯ ಸೂಚನೆಗಳು ಮಹತ್ವದ ಹೆಜ್ಜೆಯನ್ನು ಸೂಚಿಸುತ್ತವೆ ಎಂದು ತಿಳಿಸಿದ್ದಾರೆ.
ಇಸ್ರೇಲಿ ಅಂಕಿಅಂಶಗಳ ಪ್ರಕಾರ, 2023 ಅಕ್ಟೋಬರ್ 7ರಂದು ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ದಾಳಿ ಮಾಡಿ ಸುಮಾರು 1,200 ಜನರನ್ನು ಕೊಂದು 251 ಜನರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡ ನಂತರ ಇಸ್ರೇಲ್ ಗಾಜಾದಲ್ಲಿ ತನ್ನ ದಾಳಿಯನ್ನು ಪ್ರಾರಂಭಿಸಿತು. ಅಲ್ಲದೆ, 48 ಒತ್ತೆಯಾಳುಗಳು ಉಳಿದಿದ್ದಾರೆ ಎಂದು ಇಸ್ರೇಲ್ ಹೇಳುತ್ತಿದೆ. ಇದರಲ್ಲಿ 20 ಮಂದಿ ಜೀವಂತವಾಗಿದ್ದಾರೆ.
ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯಲ್ಲಿ 66,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಹೆಚ್ಚಿನವರು ನಾಗರಿಕರು ಎಂದು ಗಾಜಾ ಆರೋಗ್ಯ ಅಧಿಕಾರಿಗಳು ಹೇಳಿದ್ದು, ಈ ಪ್ರದೇಶದಲ್ಲಿ ನಡೆಯುತ್ತಿರುವ ದೀರ್ಘಕಾಲದ ದಾಳಿಯು ಗಾಜಾವನ್ನು ಧ್ವಂಸಗೊಳಿಸಿದೆ. ಅಲ್ಲದೆ, ಸಹಾಯ ನಿರ್ಬಂಧಗಳು ಬರಗಾಲವನ್ನು ಉಂಟುಮಾಡಿವೆ ಮತ್ತು ಈಗಾಗಲೇ ಭೀಕರವಾದ ಮಾನವೀಯ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸಿವೆ. (ಏಜೆನ್ಸೀಸ್)